Latest

ಜ.8, 9 ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಕರೆ

 

 

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಮೋಟಾರು ವಾಹನ ತಿದ್ದುಪಡಿ ಮಸೂದೆ 2017ನ್ನು ಹಿಂಪಡೆಯುವುದು, ಸಾರಿಗೆ ಉದ್ದಿಮೆಯನ್ನ ರಕ್ಷಿಸುವುದು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿವೆ.

ಒಟ್ಟೂ 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದ್ದು,  8ರ ಬೆಳಗ್ಗೆ 6 ಗಂಟೆಯಿಂದ ಜನವರಿ 9ರ  ಸಂಜೆ 5 ಗಂಟೆಯ ತನಕ ಮುಷ್ಕರ ನಡೆಯಲಿದೆ. ಕೇಂದ್ರ ಸರ್ಕಾರದ ವಿರುದ್ಧ ನಡೆಯಲಿರುವ ಮುಷ್ಕರ ಇದಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ನೀಡುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯದಲ್ಲಿ ಇದು ಸರಕಾರಿ ಪ್ರಾಯೋಜಿತ ಮುಷ್ಕರವಾಗಬಹುದು. 

ಕರ್ನಾಟಕದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆಟೋ, ಕ್ಯಾಬ್ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಆಸ್ಪತ್ರೆ, ಔಷಧ ಹಾಗೂ ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲದಕ್ಕೂ ಬಂದ್ ಬಿಸಿ ತಟ್ಟಬಹುದು. ಬ್ಯಾಂಕ್ ಗಳು ಕೂಡ ಬಂದ್ ಕರೆಗೆ ಬೆಂಬಲಿಸುವ ಸಾಧ್ಯತೆ ಇದೆ. 

ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಿಗೆ ಸರಕಾರವೇ ಮುನ್ನೆಚ್ಚರಿಕೆ ದೃಷ್ಟಿಯಿಂದ ರಜೆ ಘೋಷಿಸಬಹುದು.
ಯಾವ ಯಾವ ಸಂಘಟನೆಗಳು ಬಂದ್ ಗೆ ಬೆಂಬಲಿಸಲಿವೆ ಎನ್ನುವುದು ಸೋಮವಾರದ ಹೊತ್ತಿಗೆ ಸ್ಪಷ್ಟವಾಗಲಿದೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button