Latest

ಬೇಟಿ ಬಚಾವೋ ಬೇಟಿ ಪಡಾವೋ ಹೆಸರಲ್ಲಿ ವಂಚನೆ ಜಾಲ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹಣ ಸಿಗಲಿದೆ ಎಂದು ಕೆಲವರು ದಾಖಲೆಗಳನ್ನು ಸಂಗ್ರಹಿಸಿ ಸುಳ್ಳು ಅರ್ಜಿ ತುಂಬಿಸಿಕೊಳ್ಳುತ್ತಿರುವ ಕುರಿತು ಕೊನೆಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚತ್ತಿದೆ. ಅಂತಹ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕೆಲವು ಪ್ರದೇಶಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹಣ ಸಿಗುವುದೆಂದು ನಂಬಿಸಿ ಪಾಲಕರಿಂದ ಸುಳ್ಳು ಅರ್ಜಿ ನಮೂನೆಗಳನ್ನು ತುಂಬಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಈ ಯೋಜನೆಯಡಿಯಲ್ಲಿ ಯಾರಿಗೂ ನಗದು ವಿತರಣೆ ಮಾಡುವ ಕಾರ್ಯಕ್ರಮ ಇಲ್ಲ. ಇಂತಹ ಯಾವುದೇ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾರಿಯಲ್ಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಜನೆ ಅಡಿಯಲ್ಲಿ ವಂಚಕರು ನಮೂನೆಯಲ್ಲಿ ಕೋರುವ ಯಾವುದೇ ವೈಯಕ್ತಿಕ ವಿವರಗಳನ್ನು ಅಂದರೆ ಆಧಾರ ಕಾರ್ಡ, ಬ್ಯಾಂಕ್ ವಿವರಗಳು, ದೂರವಾಣಿ ಸಂಖ್ಯೆ ಇತರೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಬಾರದು. ಅನಧಿಕೃತ ಸಂಸ್ಥೆಗಳು, ವ್ಯಕ್ತಿಗಳು ಹಣವನ್ನು ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರನ್ನು ಮೋಸ ಮಾಡುತ್ತಿದ್ದಾರೆ. ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ನಿಮ್ಮನ್ನು ಸಂಪರ್ಕಿಸುವ ಎಲ್ಲರಿಗೂ ಇಂತಹ ವಂಚಕರ ವಿರುದ್ಧ ಜಾಗರೂಕರಾಗಿರಲು ತಿಳಿಸಿ. ಯಾವುದೇ ವ್ಯಕ್ತಿಗಳು ಸುಳ್ಳು ಅರ್ಜಿಗಳನ್ನು ತುಂಬಿಸಿಕೊಳ್ಳುತ್ತಿದ್ದಲ್ಲಿ ಇಲಾಖೆಯ ಗಮನಕ್ಕೆ ತರಬೇಕು ಹಾಗೂ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ವಂಚನೆಯನ್ನು ಮಾಡುವ, ಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button