ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯ ರಾಜಕೀಯ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಭಾರಿ ಬದಲಾವಣೆ ಕಾಣಲಿದೆ ಎನ್ನುವ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಬಂದಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಆಡಿದ ಮಾತುಗಳು ಫಲಿತಾಂಶಕ್ಕೂ ಮುನ್ನವೇ ಸಮ್ಮಿಶ್ರ ಸರಕಾರಕ್ಕೆ ಮೈ ಮೇಲೆ ಇರುವೆ ಬಿಟ್ಟಂತಾಗಿತ್ತು.
ಏ.23ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದಂತೆ ಬೆಳ್ಳಂಬೆಳಗ್ಗೆಯೇ ರಾಜ್ಯ ರಾಜಕೀಯದಲ್ಲಿ ಏನೋ ಆಯಿತು ಎನ್ನುವಂತೆ ಗದ್ದಲ ಆರಂಭವಾಯಿತು. ಅದು ಇನ್ನು ಎರಡು ದಿನ ಮುಂದುವರಿಯಿತು. ರಮೇಶ ಜಾರಕಿಹೊಳಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು ಕೊಡುತ್ತಿದ್ದಂತೆ ಇಬ್ಬರ ಮಧ್ಯೆ ಕೌಟುಂಬಿಕ ವ್ಯವಹಾರಗಳೂ ಸರಿದಂತೆ ಭಾರಿ ವಾಗ್ವಾದ, ಆರೋಪ-ಪ್ರತ್ಯಾರೋಪಗಳು ಕೇಳಿ ಬಂದವು.
ರಾಜ್ಯದ ಜನತೆ ಅಣ್ಣ-ತಮ್ಮನ ವಾಕ್ಸಮರವನ್ನು ಕುತೂಹಲದಿಂದ ವೀಕ್ಷಿಸಿದರು. ಅತ್ತ ರಾಜ್ಯಸರಕಾರವೂ ಏನಾಗಲಿದೆ ಎನ್ನುವ ಆತಂಕದಲ್ಲಿ ಮುಳುಗಿತು. ರಮೇಶ ಜಾರಕಿಹೊಳಿ ತವು ಇಂದೇ ರಾಜಿನಾಮೆ ನೀಡುವುದಾಗಿ ಹೇಳಿ ನಂತರ ತಮ್ಮ ಗುಂಪಿನೊಂದಿಗೆ ಮಾಜಿನಾಮೆ ನೀಡುವುದಾಗಿ ಹೇಳಿದರು.
ಬೆಳಗಾವಿ ಬಿಟ್ಟು ಬೆಂಗಳೂರಿಗೆ ಹೋಗಿ ಕುಳಿತ ರಮೇಶ್ ಕೈಗೆ ಕೈ ಶಾಸಕರ್ಯಾರೂ ಸಿಗುತ್ತಿಲ್ಲ ಎನ್ನುವ ಮಾಹಿತ ಹೊರಬೀಳತೊಡಗಿದಂತೆ ರಾಜ್ಯಸರಕಾರವೂ ಸ್ವಲ್ಪ ನಿರಾಳವಾಯಿತು. ತೀರಾ ಆಪ್ತರಾಗಿದ್ದ ಕೆಲವು ಶಾಸಕರೂ ರಮೇಶ ಮಾತು ಕೇಳದಂತಾದರೇ ಎನ್ನುವ ಅನುಮಾನಕ್ಕೆ ಕಾರಣವಾಯಿತು.
ಲೇಟೆಸ್ಟ್ ಸುದ್ದಿಯ ಪ್ರಕಾರ, ರಮೇಶ ಜಾರಕಿಹೊಳಿ ಪ್ಲ್ಯಾನ್ ಪ್ಲಾಪ್ ಆಗಿದೆ. ಸರಕಾರ ಮುಳುಗಿಸಲು ಹೋಗಿ ತಾವೇ ಮುಳುಗುವ ಸ್ಥಿತಿಗೆ ಬಂದಿದ್ದಾರೆ. ಮಹೇಶ ಕುಮಠಳ್ಳಿ, ನಾಗೇಂದ್ರ, ಶ್ರೀಮಂತ ಪಾಟೀಲ ಸೇರಿದಂತೆ ತಾವು ನಂಬಿದ್ದ ಶಾಸಕರೆಲ್ಲ ಕೈ ಕೊಟ್ಟಿದ್ದಾರೆ. ಸಭೆ ಕರೆದರೆ ಯಾರೊಬ್ಬರೂ ಬರುತ್ತಿಲ್ಲ ಎನ್ನುವ ಸುದ್ದಿಯಿದೆ.
ಆದರೆ ಇದನ್ನು ಈಗಲೇ ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯವರೆಗೆ ಎಲ್ಲರೂ ಕಾದು ನೋಡುವ ತಂತ್ರಕ್ಕೆ ಹೋಗಿರಬಹುದು. ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಆಪರೇಶನ್ ಕಮಲವೋ… ರಿವರ್ಸ್ ಆಪರೇಶನ್ನೋ ಆಗಬಹುದು.
ಆದರೆ ಒಂದಂತೂ ನಿಜ… ಈಗ ರಾಜ್ಯ ರಾಜಕೀಯ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 2-3 ಬಾರಿ ಸಮ್ಮಿಶ್ರ ಸರಕಾರ ಉರುಳಿಸಲು ಹೋಗಿ ಕೈ ಸುಟ್ಟುಕೊಂಡಿದ್ದ ಅವರು ಈ ಬಾರಿಯೂ ಕೈ ಸುಟ್ಟುಕೊಂಡರೆ ರಾಜಕೀಯದಲ್ಲಿ ಭಾರಿ ಹಿನ್ನಡೆ ಅನುಭವಿಸಲಿದ್ದಾರೆ. ಹಾಗೆಯೇ ಯಶಸ್ವಿಯಾಗಿ ಸರಕಾರ ಕೆಡವಲು ಯಶಸ್ವಿಯಾದಲ್ಲಿ ಹೀರೋ ಆಗಿ ಮಿಂಚಬಹದು.
ರಮೇಶ ಜಾರಕಿಹೊಳಿ ಹೀರೋ ಆಗಲಿದ್ದಾರೋ…. ಝೀರೋ ಆಗಲಿದ್ದಾರೋ ಮೇ 23ರ ನಂತರ ಗೊತ್ತಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ