ಅನುಭಾವ ಗೋಷ್ಠಿಯಲ್ಲಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅಭಿಮತ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹನ್ನೆರಡನೆಯ ಶತಮಾನದ ಶರಣರು ಸ್ತ್ರೀಯರಿಗೆ ಸಮಾನತೆಯನ್ನು ನೀಡುವ ಮೂಲಕ, ಅವರ ಆತ್ಮಗೌರವವನ್ನು ಹೆಚ್ಚಿಸಿದರು. ಜಗತ್ತಿನಲ್ಲಿ ಪ್ರಥಮವಾಗಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರ್ಯವನ್ನು ನೀಡುವುದರೊಂದಿಗೆ ಸ್ವಾಭಿಮಾನಿಗಳನ್ನಾಗಿಸಿದರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ನುಡಿದರು. ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ’ಶರಣೆಯರ ವಚನಗಳಲ್ಲಿ ಮಹಿಳಾ ಸಬಲೀಕರಣ ಚಿಂತನೆ’ ವಿಷಯ ಕುರಿತು ಅವರು ಮಾತನಾಡಿದರು.
ಇಂದು ಮಹಿಳೆ ಸಬಲೀಕರಣದೆಡೆಗೆ ಹೆಜ್ಜೆ ಇಟ್ಟಿದ್ದಾಳೆ ಎಂಬುದಕ್ಕಿಂತಲೂ ಹನ್ನೆರಡನೆಯ ಶತಮಾನದಲ್ಲಿಯೇ ಸಮಾನವಾಗಿ ವಿಚಾರಿಸುವ ಸ್ವಾತಂತ್ರ್ಯವನ್ನು ಪಡೆದಿದ್ದಳು. ಶರಣರು ಸ್ತ್ರೀಯರನ್ನು ವಿಚಾರಪತ್ನಿ ಎಂದು ಕರೆದರು. ಅವರ ಜ್ಞಾನವನ್ನು ಪುರಸ್ಕರಿಸಿದರು. ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಮುಕ್ತವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದಳು. ತನ್ನ ಇಚ್ಛೆಯಂತೆ ನಡೆಯುವ ಹಾಗೂ ಬದುಕುವ ಸ್ವಾವಲಂಬಿ ಜೀವನವು ಅವಳದಾಗಿತ್ತು. ಇದಕ್ಕೆ ಅಕ್ಕಮಹಾದೇವಿ ಜೀವನವೇ ಒಂದು ಸೂಕ್ತ ಉದಾಹರಣೆ. ಅಕ್ಕಮಹಾದೇವಿಯು ಬದುಕಿನ ಬಂಧನಗಳನ್ನು ಕಳೆದು ನಿರ್ಭಿಡೆಯಿಂದ ಬಾಳುವ ಜೀವನ ಮೌಲ್ಯವನ್ನು ತಿಳಿಸಿಕೊಟ್ಟಳು. ಹೀಗೆ ಹಲವಾರು ಶರಣೆಯರ ಜೀವನ ಹಾಗೂ ವಚನಗಳನ್ನು ಅವಲೋಕಿಸಿದಾಗ ಎಂಟುನೂರು ವರ್ಷಗಳ ಹಿಂದೆಯೇ ಮಹಿಳೆಯರ ಸ್ಥಾನಮಾನ ಅರಿವಿಗೆ ಬರುತ್ತದೆ. ಇಂದಿನ ಸಮಾಜಕ್ಕೆ ಶರಣೆಯರ ಬದುಕು ಅನುಕರಣೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್. ಪಾಟೀಲ ಮಾತನಾಡಿ, ಇಂದು ಮಹಿಳೆಯರು ಸಾಕಷ್ಟು ಸಾಧನೆಯ ಶಿಖರಕ್ಕೇರಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ನವಸಮಾಜವನ್ನು ಪುನರ್ನಿರ್ಮಾಣ ಮಾಡಬೇಕಾಗಿದೆ. ಅಂತೆಯೆ ಸಮಾಜ ಸಂಘಟನೆಯಲ್ಲಿ ವೀರಶೈವ-ಲಿಂಗಾಯತ ಒಂದಾಗಿ ಕಾರ್ಯಮಾಡಬೇಕಾಗಿದೆ ಎಂದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಟ್ರಂಪೆಟ್ ವಾದಕರಾದ ಪರಶುರಾಮ ಯಲ್ಲಪ್ಪ ವಾಜಂತ್ರಿ ಟ್ರಂಪೆಟ್ ಸಂಗೀತವನ್ನು ನುಡಿಸಿದರು. ರಾಜೇಶ್ವರಿ ಹಿರೇಮಠ, ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿಯ ಸದಸ್ಯರು ಹಾಗೂ ಶಂಕರ ಚೊಣ್ಣದ ಪ್ರಾರ್ಥಿಸಿದರು. ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿ ಪರಿಚಯಿಸಿದರು. ಸಾಧಕಿಯರಾದ ರತ್ನಪ್ರಭಾ ಬೆಲ್ಲದ ಹಾಗೂ ಶೈಲಜಾ ಭಿಂಗೆ ಅವರನ್ನು ಮಹಾಸಭೆಯ ವತಿಯಿಂದ ಸತ್ಕರಿಸಲಾಯಿತು. ಕಲ್ಯಾಣರಾವ್ ಮುಚಳಂಬಿ, ಸೋಮಲಿಂಗ ಮಾವಿನಕಟ್ಟಿ ಉಪಸ್ಥಿತರಿದ್ದರು. ಡಾ. ಮಹೇಶ ಗುರನಗೌಡರ ನಿರೂಪಿಸಿದರು. ಡಾ. ಗುರುದೇವಿ ಹುಲೆಪ್ಪನವರಮಠ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ