ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು :
ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿಯ ಕೆರೆಯಲ್ಲಿ ಶನಿವಾರ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಕೆರೆಯಲ್ಲಿ ಕಳೆದ ೨ ದಿನಗಳ ಹಿಂದೆ ಹೆಣ್ಣು ಶಿಶುವನ್ನು ಎಸೆಯಲಾಗಿದ್ದು ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಶಿಶುವಿನ ದೇಹವನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ವೈದ್ಯಾಧಿಕಾರಿಗಳ ಪರಿಶೀಲನೆಯ ನಂತರ ಹೆಚ್ಚಿನ ತನಿಖೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕಿತ್ತೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶಿಶುವನ್ನು ಎಸೆದ ಪಾಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಕರಣ ಕುರಿತು ಮಾಹಿತಿ ನೀಡಲು ಪಿಎಸೈ ವೀರಣ್ಣ ಲಟ್ಟಿ ನಿರಾಕರಿಸಿದ್ದಾರೆ.