ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ, ಬೆಳಗಾವಿ
ಅಡಿಕೆ ಬೆಳೆಯ ಮೇಲೆ ಅವಲಂಬಿತರಾಗಿರುವ ಸಣ್ಣ, ಅತಿಸಣ್ಣ ರೈತರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ಅಡಿಕೆ ಮಂಡಳಿ ಅವಶ್ಯಕವಾಗಿದೆ. ತೋಟಗಾರಿಕೆ ಇಲಾಖೆ ಮತ್ತು ವಿಶ್ವವಿದ್ಯಾಲಯ ನೀಡಿದ ವರದಿಯ ಸಾಧಕ ಬಾಧಕಗಳನ್ನು ಪರಾಮರ್ಶಿಸಿ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ವಿಧಾನಪರಿಷತ್‌ನಲ್ಲಿ ಮಂಗಳವಾರ ಪ್ರಕಟಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಐವನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಡಿಕೆ ಬೆಳೆಯಲ್ಲಿ ಮೌಲ್ಯವರ್ಧನೆ, ಉತ್ಪನ್ನ, ವೈವಿಧ್ಯೀಕರಣ ಹಾಗೂ ಅಡಿಕೆಯ ಪರ್ಯಾಯ ಬಳಕೆಗೆ ಸಂಬಂಧಿಸಿದಂತೆ ಸಂಶೋಧನೆಗೆ ಒತ್ತು ನೀಡುವುದು. ರೈತರು ಎದುರಿಸುತ್ತಿರುವ ಕಾನೂನಾತ್ಮಕ ಸಮಸ್ಯೆಗಳು, ರೋಗ ಮತ್ತು ಕೀಟ ನಿರ್ವಹಣೆಗೆ ಕ್ರಮ ಕೈಗೊಳ್ಳುವುದು. ಅಡಿಕೆಗೆ ಉದ್ಯಮದ ಸ್ಥಾನಮಾನ ಒದಗಿಸಿ ರಫ್ತು ಮೂಲಕ ವಿದೇಶಿ ವಿನಿಮಯ ಮಾರುಕಟ್ಟೆ ಕಲ್ಪಿಸಿ ಬೆಲೆ ಸ್ಥಿರೀಕರಣಗೊಳಿಸಲು ಅಡಿಕೆ ಮಂಡಳಿ ರಚನೆ ಅವಶ್ಯ ಎಂದು ಅಭಿಪ್ರಾಯಪಡಲಾಗಿದೆ. ಮಂಡಳಿ ರಚನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲಾಗುತ್ತಿಲ್ಲ ಎಂದು ಸಚಿವರು ತಿಳಿಸಿದರು.
ಹಾಪ್‌ಕಾಮ್ಸ್ ಬಲವರ್ಧನೆಗೆ ಕ್ರಮ:
ರಾಜ್ಯದ ೨೨ ನಗರ ಪ್ರದೇಶಗಳಲ್ಲಿ ೪೯೬ ಹಾಪ್‌ಕಾಮ್ಸ್ ಮಳಿಗೆಗಳು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರು ವಿಧಾನಪರಿಷತ್‌ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪಿ. ಆರ್. ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳ (ಕೆ.ಎಚ್.ಎಫ್.) ರಾಜ್ಯಮಟ್ಟದ ಅಪೆಕ್ಸ್ ಸಹಕಾರಿ ಸಂಸ್ಥೆಯಾಗಿದೆ. ಅಲ್ಲದೆ, ೨೨ ಜಿಲ್ಲಾ ಹಾಪ್‌ಕಾಮ್ಸ್‌ಗಳು ಸದಸ್ಯ ಸಂಘಗಳಾಗಿವೆ. ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮದನ್ವಯ ತೋಟಗಾರಿಕೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಚುನಾಯಿತ ನಿರ್ದೇಶಕ ಮಂಡಳಿಯಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳ ಮೂಲಕ ರೈತರ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಹಾಪ್‌ಕಾಮ್ಸ್ ಸಂಸ್ಥೆಗಳಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಸದಸ್ಯ ಅಥವಾ ಸಹ ಸದಸ್ಯ ರೈತರಿಂದ ಸಂಸ್ಥೆಯೇ ಖರೀದಿಸಿ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿಗಳಿಗೆ ಬಡ್ತಿ:
ಕೃಷಿ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರುವ ಕುರಿತು ಪರಿಶೀಲಿಸಲಾಗುತ್ತಿದೆ. ಈ ಮೂಲಕ ಕೃಷಿ ಪದವೀಧರರಲ್ಲದ ಸಹಾಯಕ ಕೃಷಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ಆದ್ಯತೆ ನೀಡಲಾಗುವುದು ಎಂದು ಕೃಷಿ ಸಚಿವ ಎನ್. ಹೆಚ್. ಶಿವಶಂಕರ ರೆಡ್ಡಿ ಅವರು ರಾಜ್ಯ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಶರಣಪ್ಪ ಮಟ್ಟೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಂಬರುವ ಎರಡು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು. ಸೇವಾ ಹಿರಿತನ ಹೊಂದಿರುವ ಕೃಷಿ ಪದವೀಧರರಲ್ಲದ ಸಹಾಯಕ ಕೃಷಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ