Latest

ಇವರನ್ನು ನಡೆದಾಡುವ ದೇವರು, ಎಲ್ಲರ ಪಾಲಿನ ದೈವ ಅನ್ನದೆ ಇರಲು ಹೇಗೆ ಸಾಧ್ಯ? -ಎಸ್.ಜಯಕುಮಾರ ಲೇಖನ

  ಎಸ್.ಜಯಕುಮಾರ್,
 ನಿರ್ದೇಶಕರು, (ಪ್ರಾಥಮಿಕ ಶಿಕ್ಷಣ) ಕರ್ನಾಟಕದ ಸರ್ಕಾರ

 ಸದಾ ನಗುಮೊಗದ, ಸಿದ್ದಗಂಗಾ ಮಠಕ್ಕೆ ಬಂದ ಯಾರೇ ಆಗಲಿ, ಬಡವ ಬಲ್ಲಿದ, ಹಿರಿ ಕಿರಿಯರೆಂಬ ತಾರತಮ್ಯ ಇಲ್ಲದೆ, ಎಲ್ಲರಿಗೆ ಕೇಳುತ್ತಿದ್ದ ಮೊದಲ ಮಾತೇ “ಊಟ ಮಾಡಿದ್ರಾ” ಊಟಕ್ಕೋಗಿ, ಎಂಬುದು.
ಬಹುಶಃ ಈ ಮಾತೇ, ಶ್ರೀಗಳು ಎಲ್ಲರ ಪ್ರೀತಿಗೆ ಪಾತ್ರರಾದ ಅಂಶ. ಇಂದೇನೋ ಬಹು ಜನರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತೇವೆ ಎಂಬ ಮಾತನ್ನಾಡುತ್ತಿರಬಹುದು. ಆದರೆ ಅಂದು ಶ್ರೀಗಳು ರಾಜ್ಯದ ಅನೇಕ ಗ್ರಾಮಾಂತರದ ಪ್ರದೇಶದಲ್ಲಿ ಊರವರು ದಾನ ನೀಡಿದ ಹಳೆಯ ಗುಡಿಸಲು, ಹಳೆ ಮನೆಗಳಲ್ಲಿ ಶಾಲೆ ತೆರೆದು ಹಳ್ಳಿ ಹಳ್ಳಿಗಳಲ್ಲಿ ಶಿಕ್ಷಣದ ಬಗ್ಗೆ ಮೌನ ಕಹಳೆ ಊದಿ, ಡಂಗುರ ಬಾರಿಸಿ ಅನೇಕ ಹಳ್ಳಿಯ ವಿದ್ಯಾರ್ಥಿಗಳು ಯಾವುದೇ ಸೌಲಭ್ಯ ಇಲ್ಲದೆ ಇದ್ದರೂ, ಶಿಕ್ಷಣ ನೀಡುವ ಕಾಯಕವೊಂದನ್ನೇ ಧ್ಯೇಯವಾಗಿಟ್ಟುಕೊಂಡ, ಸೌಲಭ್ಯ ರಹಿತ ಶಾಲೆಗಳಲ್ಲಿಯೇ ಓದಿ ಅತ್ಯುತ್ತಮ ವಿದ್ಯಾವಂತರಾಗಿ ಹೊರ ಹೊಮ್ಮಿ ತಮ್ಮ ಬಾಳಲ್ಲದೆ ಹಳ್ಳಿಯ ಇತರರ ಬಾಳನ್ನು ಸಹ ಬದಲಿಸಿ ಹಳ್ಳಿಗಳ ಚಿತ್ರಣವನ್ನೇ ಬದಲಿಸಿದವರನ್ನು ನಡೆದಾಡುವ ದೇವರು, ಎಲ್ಲರ ಪಾಲಿನ ದೈವ ಅನ್ನದೆ ಇರಲು ಹೇಗೆ ಸಾಧ್ಯ? ಯಾವುದೇ ಹಳ್ಳಿಗೆ ಹೋದರೂ ಒಂದಲ್ಲಾ ಒಂದು ರೀತಿಯಲ್ಲಿ ಆ ಊರಿಗೆ ಸಿದ್ದಗಂಗಾ ಮಠದ ನಂಟು ಇರುವುದು ಮಠದ ಹಿರಿಮೆ, ಶ್ರೀಗಳ ನಿಸ್ವಾರ್ಥ ಸೇವೆಯ ಫಲ.
ತುಮಕೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ (SIT) ತೆರೆದು ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗೆ ಅಡಿಪಾಯ ಹಾಕಿದರು. ರೈತರಿಗೆ ತಂತ್ರಜ್ಞಾನದ ಅರಿವು ಮೂಡಿಸಲು ಸಿದ್ದಗಂಗಾ ಜಾತ್ರೆಯಲ್ಲಿ ಅತ್ಯುತ್ತಮವಾದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿ ಅನೇಕ ಸಂಶೋಧನೆಗಳು, ಆವಿಷ್ಕಾರಗಳ ಪರಿಚಯವನ್ನು ರೈತರಿಗೆ ಪರಿಚಯಿಸಿ ಅವರಿಗೆ ದಾರಿ ದೀಪವಾದವರು. ಇಂದು ಕರ್ನಾಟಕದ ಮನೆಗಳಲ್ಲಿ ಶ್ರೀಗಳ ಫೋಟೋ ಇಲ್ಲದ ಮನೆ ಇಲ್ಲ. ಎಲ್ಲವನ್ನೂ ಮೀರಿ ಮಾನವತೆಯ ಬಗ್ಗೆ ಅವರಿಗಿದ್ದ ಕಾಳಜಿ ಜನ ಮೆಚ್ಚುಗೆಗೆ ಪಾತ್ರವಾಯಿತು.ಭಕ್ತಿ ಭಂಡಾರಿ ಬಸವಣ್ಣನವರು ತಮ್ಮ ವಚನಗಳಲ್ಲಿ ಹೇಳಿದಂತೆ ನಿಜ ಅರ್ಥದಲ್ಲಿ ಶರಣರಾಗಿ ಜೀವನ ನಡೆಸಿ ಇತರರಿಗೆ ಆದರ್ಶರಾದವರು. ಅವರು ಅಂದು ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹ ಇಂದು ಸಮಾಜದಲ್ಲಿ ಅನೇಕ ಗ್ರಾಮೀಣ ಪ್ರತಿಭೆಗಳು ಅನೇಕ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಹಾಯವಾಯಿತು. ನೋವಿರುವ ಯಾರೇ ಬಂದು ಅರಿಕೆ ಮಾಡಿಕೊಂಡು ಮನಸ್ಸಲ್ಲಿ ಪ್ರಾರ್ಥನೆ ಮಾಡಿದರೂ ಸಾಕು ಪರಿಹಾರವಾಯಿತೆಂದೇ ಅವರ ನಂಬಿಕೆ. ಯಾರೂ ಸಿದ್ದಗಂಗಾ ಸ್ವಾಮಿಗಳ ಮೇಲೆ ಆಣೆ ಮಾಡಲು ಹೆದರುತ್ತಿದ್ದುದು ಜನರಿಗೆ ಅವರ ಮೇಲಿದ್ದ ಭಕ್ತಿ ತೋರುತ್ತದೆ.
ಇಂತಹ ಸದ್ಗುಣಗಳ ಗಣಿ, ನಡೆದಾಡುವ ದೇವರು, ಡಾ ಶಿವಕುಮಾರ ಸ್ವಾಮಿಗಳು, ಇಂದು ನಮ್ಮ ಮಧ್ಯೆ ಇಲ್ಲ ಎನ್ನುವದು ನೋವಿನ ಸಂಗತಿಯಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವುದೊಂದೇ ನಮಗೆ ಉಳಿದಿರುವ ದಾರಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button