Latest

ಕಚೇರಿ ಸ್ಥಳಾಂತರ ಪ್ರಕ್ರಿಯೆಗೆ ಅಧಿವೇಶನದ ವೇಳೆ ಚಾಲನೆ ನೀಡಿ -ಹುಕ್ಕೇರಿ ಶ್ರೀ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ಸೇರಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸುವ ಪ್ರಕ್ರಿಯೆಗೆ ಅಧಿವೇಶನ ಮುಗಿಯುವದರೊಳಗಾಗಿ ಚಾಲನೆ ನೀಡಬೇಕು ಎಂದು ಉತ್ತರ ಕರ್ನಾಟಕದ ಮಠಾಧೀಶರು ಆಗ್ರಹಿಸಿದ್ದಾರೆ.
ಶನಿವಾರ ಉತ್ತರ ಕನಾಟಕ ವಿಕಾಸ ವೇದಿಕೆ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಮಠಾಧೀಶರ ಒಕ್ಕೂಟದ ಪರವಾಗಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿಗಳು, ಬೇಡಿಕೆ ಈಡೇರಿಸದಿದ್ದರೆ ಮುಂದಾಗುವ ಬೆಳವಣಿಗೆಗಳಿಗೆ ರಾಜ್ಯ ಸರಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಇಂದಿಗೂ ಸಮಗ್ರ ಕರ್ನಾಟಕದ ಪರವಾಗಿದ್ದೇವೆ. ಇಂದಿಗೂ ಸರಕಾರದ ಮೇಲೆ ಭರವಸೆ ಹೊಂದಿದ್ದೇವೆ. ಪ್ರತ್ಯೇಕತೆಯ ಹೋರಾಟ ನಡೆಸದಂತೆ ಹೋರಾಟಗಾರರ ಮನವೊಲಿಸಿದ್ದೇವೆ. ನಮ್ಮ ನಿರೀಕ್ಷೆಗಳು ಹುಸಿಯಾದರೆ ಹೋರಾಟಗಾರರು ಕೈಗೊಳ್ಳುವ ನಿರ್ಣಯಕ್ಕೆ ಸ್ವಾಮೀಜಿಗಳು ಬದ್ದರಾಗುತ್ತೇವೆ. ಇನ್ನಷ್ಟು ದಿನ ಹೋರಾಟಗಾರರನ್ನು ತಡೆಯಲಿಕ್ಕೆ ಆಗುವುದಿಲ್ಲ. ಜನರ ಪ್ರಶ್ನೆಗಳಿಗೂ ಉತ್ತರಿಸಲಿಕ್ಕೆ ಆಗುವುದಿಲ್ಲ. ಅಂತಹ ಹೋರಾಟದ ಅಪಾಯವನ್ನು ರಾಜ್ಯ ಸರಕಾರ ತಂದಿಡಬಾರದು ಎಂದು ಕಿವಿ ಮಾತು ಹೇಳಿದರು.
ಈ ಭಾಗದ ಎಲ್ಲ 13 ಜಿಲ್ಲೆಗಳ ಶಾಸಕರು ಎಲ್ಲ 10 ದಿನಗಳ ಕಾಲ ಅಧಿವೇಶನಕ್ಕೆ ಹಾಜರಾಗಬೇಕು. ಅಧಿವೇಶನದಲ್ಲಿ ಪಕ್ಷ ಬೇಧ ಮರೆತು ತಮ್ಮ ಭಾಗದ ಸಮಸ್ಯೆಗಳ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ನ್ಯಾಯ ದೊರಕಿಸಬೇಕು ಎಂದು ಮನವಿ ಮಾಡಿದ ಅವರು, ಸರಕಾರ ಮತ್ತು ಶಾಸಕರು ತಮ್ಮ ಪಾಲಿನ ಕರ್ತವ್ಯ ಪಾಲಿಸದಿದ್ದರೆ ಅವರ ವಿರುದ್ಧವೇ ಹೋರಾಟ ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುತ್ನಾಳದ ಶಿವಾನಂದ ಸ್ವಾಮೀಜಿ ಮಾತನಾಡಿ, ಹೊರಗಿನ ಹೋರಾಟಕ್ಕಿಂತ ಸದನದ ಒಳಗಿನ ಹೋರಾಟ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಶಾಸಕರು ಸದನದ ಒಳಗೆ ಉತ್ತರ ಕರ್ನಾಟಕದ ಧ್ವನಿ ಎತ್ತುವ ಮೂಲಕ ತಮಗೆ ಮತ ನೀಡಿದ ಜನತೆಯ ಋಣ ತೀರಿಸಬೇಕು. ಋಣ ತೀರಿಸುವ ಕರ್ತವ್ಯ ಪಾಲಿಸದಿದ್ದರೆ ಜನಾಂದೋಲನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ಅಧಿವೇಶನದ ಸಮಯದಲ್ಲಿ ಮುಖ್ಯಮಂತ್ರಿಗಳೇ ಮಠಾಧೀಶರನ್ನು ಕರೆದು ಅವರ ಬೇಡಿಕೆಗಳನ್ನು ಆಲಿಸುವ ಸೌಜನ್ಯ ತೋರಬೇಕು. ಬೇಡಿಕೆಗಳನ್ನು ಆಲಿಸಿ ಅವುಗಳನ್ನು ಈಡೇರಿಸಬೇಕು. ಸ್ವಾಮೀಜಿಗಳ ಸಲಹೆಯೆಂತೆ ಅಧಿವೇಶನದ ಸಮಯದಲ್ಲಿ ಪ್ರತಿಭಟನೆ ಮಾಡುವುದಿಲ್ಲ. ನಾವು ಇಟ್ಟ ಭರವಸೆ ಈಡೇರದಿದ್ದರೆ ನಿರ್ಣಾಯಕ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.
ಭೀಮಪ್ಪ ಗಡಾದ ಅವರು ಮಾತನಾಡಿ, ಹೋರಾಟಗಾರರ ಮತ್ತು ಜನತೆಯ ಸಹನೆಗೂ ಒಂದು ಮಿತಿ ಇರುತ್ತದೆ ಎಂಬುದನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು. ಇದೇ ಅಧಿವೇಶನದಲ್ಲಿ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರದಿದ್ದರೆ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button