Latest

ಕಲಾಪ ನಾಳೆಗೆ ಮುಂದೂಡಿಕೆ

       


      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಸುವರ್ಣಸೌಧದಲ್ಲಿ ಪ್ರಾರಂಭವಾದ ರಾಜ್ಯ ವಿಧಾನ ಪರೀಷತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಎನ್ ಅನಂತಕುಮಾರ, ಲೋಕಸಭೆಯ ಮಾಜಿ ಸಭಾಧ್ಯಕ್ಷ ಸೋಮನಾಥ ಚಟರ್ಜಿ, ಕೇಂದ್ರದ ರೇಲ್ವೆ ಖಾತೆಯ ಮಾಜಿ ಸಚಿವ ಸಿ ಕೆ ಜಾಫರ್ ಷರೀಫ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರೂ ಹಾಗೂ ರಾಜ್ಯದ ವಸತಿ ಸಚಿವರೂ ಆಗಿದ್ದ ಕನ್ನಡ ಚಿತ್ರರಂಗದ ಹೆಸರಾಂತ ನಟ ಅಂಬರೀಷ್ ಸೇರಿದಂತೆ ಇತ್ತೀಚೆಗೆ ಅಗಲಿದ 14 ಗಣ್ಯರಿಗೆ ಸಂತಾಪ ಸೂಚನೆ ಮಂಡಿಸಿ ಸದನವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಮಂಡಿಸಿದರು.
ಸಭಾನಾಯಕರಾದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಡಾ ಜಯಮಾಲ ಅವರು ಸಭಾಪತಿ ಮಂಡಿಸಿದ ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿ ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು. ಕವಿ, ಪತ್ರಕರ್ತ, ಸರ್ವಶ್ರೇಷ್ಠ ವಾಗ್ಮಿ, ಚಿಂತಕರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸುವರ್ಣ ಚತುಷ್ಪಥ ಹೆದ್ದಾರಿಯ ರೂವಾರಿಗಳಾಗಿದ್ದರು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮತ್ತಿತರ ಕಾರ್ಯಗಳ ಮೂಲಕ ವಾಜಪೇಯಿ ಅವರು ಮಾಡಿದ ಸ್ಮರಣಾರ್ಹ ಕಾರ್ಯಗಳ ಗುಣಗಾನಮಾಡಿದರು. ಮಾಜಿ ಪ್ರಧಾನಿ ವಾಜಪೇಯಿ ಅವರು ಭಾರತ ಪಾಕ್ ಬಾಂಧವ್ಯದ ಸೇತುವೆಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭಿಸಿ ಉಭಯ ದೇಶಗಳ ಜನರ ಭಾವನೆಗಳಿಗೆ ಸ್ಪಂದಿಸಿದ್ದರು. ಪಕ್ಷಾತೀತವಾಗಿ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿದ್ದರು. ಸಂಕಟಗಳು ಬರುತ್ತವೆ
ಬರಲಿ, ಅವು ನಿಲ್ಲುವುದಿಲ್ಲ ನಾವು ಬಾಗುವುದಿಲ್ಲ ಎಂಬ ವಾಜಪೇಯಿ ಅವರ ಕವಿತೆಯೊಂದರ ಕನ್ನಡ ಭಾವಾನುವಾದವನ್ನು ಜಯಮಾಲಾ ಅವರು ಸದನದಲ್ಲಿ ವಾಚಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಲೋಕಸಭೆಗೆ ಚುನಾಯಿತರಾಗಿದ್ದ ಹೆಚ್ ಎನ್ ಅನಂತಕುಮಾರ, ಭಾರತೀಯ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಲೋಕಸಭೆ ಮಾಜಿ ಸಭಾಧ್ಯಕ್ಷ ಸೋಮನಾಥ ಚಟರ್ಜಿ, ಕೇಂದ್ರದ ಮಾಜಿ ಸಚಿವರಾದ ಸಿ ಕೆ ಜಾಫರ್ ಷರೀಫ್, ಡಾ. ಎಂ ಹೆಚ್ ಅಂಬರೀಷ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಮೀರ್ ಅಜೀಜ್ ಅಹಮದ್, ಮಾಜಿ ಸಚಿವರಾದ ಓಂಪ್ರಕಾಶ ಕಣಗಲಿ, ತಿಪ್ಪೇಸ್ವಾಮಿ, ಈಟಿ ಶಂಭುನಾಥ, ವಿಮಲಾಬಾಯಿ ಜಗದೇವರಾವ್ ದೇಶಮುಖ್, ತಮಿಳನಾಡಿನ ಮಾಜಿ ಮುಖ್ಯಮಂತ್ರಿ ಡಾ ಎಂ ಕರುಣಾನಿಧಿ, ಗದುಗಿನ ತೋಂಟದಾರ್ಯ ಡಾ ಸಿದ್ದಲಿಂಗ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ಡಾ. ಸುಮತೀಂದ್ರ ನಾಡಿಗ, ಜ. ಹೋ. ನಾರಾಯಣಸ್ವಾಮಿ ಅವರ ಅಗಲಿಕೆಗೆ ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಟಿ ಎ ಶರವಣ, ಎಸ್ ಎಲ್ ಭೋಜೆಗೌಡ, ಜಯಮ್ಮ, ರವಿ, ವೀಣಾ ಅಚ್ಚಯ್ಯ ಅವರನ್ನು ಒಳಗೊಂಡಂತೆ ಇಡೀ ಸದನವೇ ಕಂಬನಿ ಮಿಡಿಯಿತು.

ನಂತರ, ಸದನದ ಕಲಾಪವನ್ನು ಸಭಾಪತಿ ಮಂಗಳವಾರ ಬೆಳಿಗ್ಗೆ 10 ಗಂಟೆಯವರೆಗೆ ಮುಂದೂಡಿದರು.

ಆರತಿ ಎತ್ತಿ ಸ್ವಾಗತ: ಇದಕ್ಕೂ ಮೊದಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರೈತ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button