ಪ್ರಗತಿವಾಹಿನಿ ಸುದ್ದಿ, ಪ್ರಯಾಗ
ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಕೊಟ್ಟೂರು ಜಾನಕೋಟೆಯ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಿಂದ ಸುಮಾರು ನೂರು ಸ್ವಾಮಿಗಳಿಗೆ ಮಂಗಳವಾರ ಪ್ರಯಾಗ ಕುಂಭಮೇಳದಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು.
ಪ್ರಯಾಗ ಅಲ್ಹಾಬಾದ್ ಕಾಶಿ ಜಂಗಮವಾಡಿ ಮಠದಿಂದ ತ್ರಿವೇಣಿ ಸಂಗಮದವರೆಗೆ ಕಾಶಿ ಜಗದ್ಗುರುಗಳನ್ನು ಉತ್ಸವದಲ್ಲಿ ಕರೆದೊಯ್ಯಲಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೆಲಿಕಾಪ್ಟರ್ ಮುಖಾಂತರ ಪುಷ್ಪವೃಷ್ಟಿ ಮಾಡಿ ಕಾಶಿ ಜಗದ್ಗುರು ಹಾಗೂ ಇತರ ಸಂತರನ್ನು ಗೌರವಿಸಿದರು.
ಈ ವೇಳೆ ಮಾತನಾಡಿದ ಕಾಶಿ ಜಗದ್ಗುರುಗಳು, ಕೋಟ್ಯಂತರ ಜನ ಕುಂಭ ಮೇಳದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವುದು ಅರ್ಥಪೂರ್ಣವಾಗಿದೆ. ಇದು ಜನರಲ್ಲಿ ಶೃದ್ಧೆಯನ್ನು ಬೆಳೆಸುತ್ತದೆ ಎಂದರು.
ಉಗ್ರಗಾಮಿಗಳು ನಮ್ಮ ಸೈನಿಕರನ್ನು ಹತ್ಯೆ ಮಾಡಿರುವುದು ಅಪಾಯಕರ ಬೆಳವಣಿಗೆ. ಪ್ರಧಾನಿ ಮೋದಿಯೊಂದಿಗೆ ಇಡೀ ಭಾರತದ ಸಂತರಿದ್ದಾರೆ. ಮುನ್ನುಗ್ಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಿ ಎಂದು ಅವರು ಹೇಳಿದರು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದರ ಮೂಲಕ ಸಂತ ಪರಂಪರೆಗೆ ವಿಶೇಷ ಸ್ಥಾನ ಬಂದಿದೆ. ಕುಂಭ ಮೇಳದಲ್ಲಿ ಸ್ವಚ್ಛತೆ, ಶಿಸ್ತುಬದ್ಧ ವ್ಯವಸ್ಥೆ ಮಾಡಿರುವುದು ಮತ್ತು ಹಿಂದೂ ಧರ್ಮದ ಮೇಲೆ ಅವರಿಗಿರುವ ಗೌರವ ಮೆಚ್ಚುವಂತದ್ದು ಎಂದರು.
ಬೆಂಗಳೂರಿನ ವಿಭೂತಿಪುರ ಮಠದ ಮಹಾಂತಲಿಂಗ ಸ್ವಾಮೀಜಿ ಮಾತನಾಡಿ, ಭಾರತದ ಪಂರಂಪರೆಯಲ್ಲಿ ಸಂತ ಮಹಾಂತರಿಗ ವಿಶೇಷ ಸ್ಥಾನವಿದೆ. ಇಲ್ಲಿ ಸಹ ವಿಶೇಷ ಗೌರವ ಕೊಡುವ ಮೂಲಕ ಸಂಪ್ರದಾಯವನ್ನು ಪಾಲಿಸಲಾಗಿದೆ ಎಂದರು.
ಕೊಟ್ಟೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಈ ಕಾರ್ಯಕ್ರಮ ಎಲ್ಲರಲ್ಲೂ ಉತ್ಸಾಹ ತಂತಿದೆ. ದೇಶಭಕ್ತಿ ಇಮ್ಮಡಿಗೊಳಿಸುತ್ತದೆ ಎಂದರು. ಚನ್ನಗಿರಿ ವಿರಕ್ತಿ ಮಠದ ಡಾ.ಚಂದ್ರಮೋಹನ ದೇವರು ಹಾಗೂ ನೂರಾರು ಶಿವಾಚಾರ್ಯರು, ಸಂತರು ಭಾಗಿಯಾಗಿ ಕುಂಭಮೇಳದ ಸಂಭ್ರಮ ಹೆಚ್ಚಿಸಿದರು.