ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವುದು ವಿಶ್ವೇಶ್ವರಯ್ಯನವರಿಗೆ ಮಾಡುವ ಅವಮಾನ ಎಂದಿರುವ ಲೋಕಸಭಾ ಸದಸ್ಯ ಸುರೇಶ ಅಂಗಡಿ, ಭಾನುವಾರವೇ ಈ ನಿರ್ಧಾರದ ವಿರುುದ್ಧ ಹೋರಾಟಕ್ಕೆ ಜನಪ್ರತಿನಿಧಿಗಳ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿಯಲ್ಲಿ ಪ್ರಕಟವಾಗಿರುವ ಸುದ್ದಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇಂತಹ ನಿರ್ಧಾರದಿಂದ ಸರಕಾರ ಜನರನ್ನು ಕೆಣಕುತ್ತಿದೆ. ಜನರು ಬೀದಿಗಿಳಿದು ಹೋರಾಟ ನಡೆಸಿದರೆ ಉಂಟಾಗಬಹುದಾದ ಕಾನೂನು ಸುವ್ಯವಸ್ಥೆ ಸಮಸ್ಯೆಗೆ ಸರಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂಬಂಧ ಕನ್ನಡ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ಜೊತೆಗೆ ನಾನೂ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇನೆ. ಸರಕಾರಕ್ಕೆ ಪತ್ರವನ್ನೂ ಬರೆಯುತ್ತೇನೆ. ಸಾಧ್ಯವಾದ ಎಲ್ಲ ಕ್ರಮಗಳ ಮೂಲಕ ಈ ನಿರ್ಧಾರದಿಂದ ಸರಕಾರ ಹಿಂದೆ ಸರಿಯುವಂತೆ ಮಾಡಲಾಗುವುದು ಎಂದು ಸುರೇಶ ಅಂಗಡಿ ತಿಳಿಸಿದ್ದಾರೆ.