ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಎನ್ ಪಿಎಸ್ ರದ್ದುಗೊಳಿಸಲು ನಿರ್ಣಯ ಕೈಗೊಂಡು ಹಳೇಯ ಪಿಂಚಣಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ಬೃಹತ್ ಹೋರಾಟದ ಜೊತೆ ಶಾಂತಿಯುತವಾದ ಪಾದಯಾತ್ರೆಯನ್ನು ಹಿರೇ ಬಾಗೇವಾಡಿಯಿಂದ ಸುವರ್ಣ ವಿಧಾನಸೌಧದವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕದ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಂ ತಿಳಿಸಿದರು.
ಇಲ್ಲಿಯ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಚುನಾವಣೆಯ ಹೊಸ್ತಿಲಲ್ಲಿ ಎನ್ ಪಿಎಸ್ ರದ್ದುಗೊಳಿಸುವ ಬಗ್ಗೆ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಚುನಾವಣೆಯ ನಂತರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಪರಿಣಾಮ ರಾಜ್ಯ ಸರ್ಕಾರದ ಗಮನ ಇದರತ್ತ ಸೆಳೆಯುವ ಕಾರಣದಿಂದಾಗಿ ಹೋರಾಟದ ಜೊತೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ದೆಹಲಿ ಸರ್ಕಾರ ಈಗಾಗಲೇ ಬಹುಮತದಿಂದ ಇದನ್ನು ರದ್ದುಗೊಳಿಸುವ ನಿರ್ಣಯವನ್ನು ಸ್ವೀಕರಿಸಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆಯ ಪ್ರಕಾರ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
೩.೫೦ ಲಕ್ಷದಷ್ಟಿರುವ ನೌಕರರ ಭಾವನೆಯನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದ ಅವರು, ರಾಜ್ಯದ ಎಲ್ಲ ಎನ್ ಪಿಎಸ್ ನೌಕರರು ಈ ಹೋರಾಟದಲ್ಲಿ ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್ ಪಿಎಸ್ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ ಅಬಲೂರ, ಹಿರಿಯ ಉಪಾಧ್ಯಕ್ಷ ಶಿದ್ದಪ್ಪ ಸಂಗಣ್ಣನವರ, ಖಜಾಂಚಿ ಕೇಶವಪ್ರಸಾದ ಕೆ.ಎಚ್., ತಾಲೂಕಾ ಘಟಕದ ಅಧ್ಯಕ್ಷ ರವೀಂದ್ರ ಜಾಧವ, ತಾಲೂಕಾ ಘಟಕದ ಉಪಾಧ್ಯಕ್ಷ ಶಿವಾನಂದ ಬೆಣಚಮರಡಿ, ಎಂ.ಜಿ.ಪತ್ತಾರ, ಸೇರಿದಂತೆ ತಾಲೂಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ