ಪ್ರಗತಿವಾಹಿನಿ ವಿಶೇಷ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಗೆ ಜಾಗತಿಕ ಟೆಂಡರ್ ಆಹ್ವಾನಿಸಲಾಗಿದೆ.
58 ವಾರ್ಡ್ ಗಳನ್ನು ಹೊಂದಿರುವ ಬೆಳಗಾವಿ ಮಹಾನಗರದಲ್ಲಿ 10 ವಾರ್ಡ್ ಗಳಿಗೆ ಈಗಾಗಲೆ ನಿರಂತರ ನೀರು ಸರಬರಾಜಾಗುತ್ತಿದೆ. ಇನ್ನುಳಿದ 48 ವಾರ್ಡ್ ಗಳಿಗಾಗಿ ಈಗ ಯೋಜನೆ ರೂಪಿಸಲಾಗಿದೆ.
ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ವಿಶ್ವ ಬ್ಯಾಂಕ್ ನೆರವಿನಿಂದ ಕಾರ್ಯಗತಗೊಳ್ಳಲಿದೆ. ಯೋಜನೆಗೆ ಜಾಗತಿಕ ಟೆಂಡರ್ ಕರೆಯಲಾಗಿದೆ. 5 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಬೇಕಿದ್ದು, ಗುತ್ತಿಗೆ ಪಡೆದವರು 12 ವರ್ಷ ನಿರ್ವಹಣೆಯನ್ನೂ ಮಾಡಬೇಕಿದೆ.
427 ಕೋಟಿ ರೂ. ಅಂದಾಜು ವೆಚ್ಚ
ಈಗಾಗಲೆ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಆಯ್ಕೆಯಾಗಿ ಕೆಲಸ ನಡೆಯುತ್ತಿರುವ ಬೆಳಗಾವಿ ಮಹಾನಗರದ 48 ವಾರ್ಡ್ ಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಗೆ 427 ಕೋಟಿ ರೂ. ವೆಚ್ಚ ಅಂದಾಜು ಮಾಡಲಾಗಿದೆ. ಇದರಲ್ಲಿ ಶೇ.70 ಮೊತ್ತವನ್ನು ವಿಶ್ವಬ್ಯಾಂಕ್ ಭರಿಸಲಿದ್ದು, ಇನ್ನುಳಿದ ಶೇ.30ರಷ್ಟನ್ನು ಮಹಾನಗರ ಪಾಲಿಕೆ ನೀಡಬೇಕಿದೆ.
ಈಗಾಗಲೆ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಲಿಕೆ, ತನ್ನ ಪಾಲಿನ ಹಣವನ್ನು 5 ವರ್ಷದಲ್ಲಿ ಹಂತ ಹಂತವಾಗಿ ನೀಡಲು ಅವಕಾಶವಿದ್ದು, ಈ ಯೋಜನೆಗಾಗಿ ಸುಮಾರು 32 ಕೋಟಿ ರೂ.ಗಳನ್ನು ತನ್ನಲ್ಲಿ ಉಳಿಸಿಕೊಂಡಿದೆ. ಜೊತೆಗೆ ಮುನ್ಸಿಪಲ್ ಬಾಂಡ್ ಬಿಡುಗಡೆ ಮಾಡುವ ಮೂಲಕ ಕೂಡ ಹಣ ಸಂಗ್ರಹಿಸಲು ಅವಕಾಶವಿದೆ. ಬೆಳಗಾವಿ ಮಹಾನಗರ ಪಾಲಿಕೆ ಈವರೆಗೆ ಯಾವುದೇ ಯೋಜನೆಗೆ ಬಾಂಡ್ ಬಿಡುಗಡೆ ಮಾಡಿ ಹಣ ಸಂಗ್ರಹಿಸಿಲ್ಲ. ಈ ಯೋಜನೆಗೆ ಹಾಗೊಮ್ಮೆ ಮಾಡಿದರೆ ಇದೇ ಮೊದಲಾಗಲಿದೆ.
ಫೆ.28ರೊಳಗೆ ಟೆಂಡರ್ ಫಾರ್ಮ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಟೆಂಡರ್ ಹಾಕಬೇಕಿದ್ದು, ಇಲಾಖೆಯ ವೆಬ್ ಸೈಟ್ ನಲ್ಲಿ ವಿವರಗಳನ್ನು ಹಾಕಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗೆ ಧಕ್ಕೆ?
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈಗಾಗಲೆ ಹಲವಾರು ರಸ್ತೆ ಕಾಮಗಾರಿಗಳು ರೂಪುಗೊಂಡಿವೆ. ಈ ಕಾಮಗಾರಿಗಳೆಲ್ಲ ಮುಗಿಯುವ ಸಂದರ್ಭದಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಜಾರಿಯಾದರೆ ಮತ್ತೆ ರಸ್ತೆಗಳನ್ನು ಅಗೆಯಲಾಗುತ್ತದೆಯೋ ಅಥವಾ ರಸ್ತೆ ಮಾಡುವಾಗಲೆ ಅಗತ್ಯ ಪೈಪ್ ಲೈನ್ ಗಳಿಗೆ ಅವಕಾಶ ಮಾಡಿಕೊಳ್ಳಲಾಗುತ್ತದೆಯೋ ಕಾದು ನೋಡಬೇಕಿದೆ. ಬೆಳಗಾವಿಯಲ್ಲಿ ಈ ರೀತಿ ಪೈಪ್ ಲೈನ್ ಗಳಿಗಾಗಿ ರಸ್ತೆ ಅಗೆಯುವುದು ದೊಡ್ಡ ಸಮಸ್ಯೆಯಾಗಿದ್ದು, ಈ ಬಗ್ಗೆ ಯಾವುದೇ ನಿಯಮಾವಳಿ ಜಾರಿಯಾಗುತ್ತಿಲ್ಲ.
ಇನ್ನು ಮುಂದೆ ರಸ್ತೆಗಳನ್ನು ಮಾಡುವಾಗ ಮುಂದಿನ ಯಾವುದೇ ಯೋಜನೆಗೆ ರಸ್ತೆ ಅಗೆಯದಂತೆ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳಲಾಗುತ್ತದೆ. ಡಕ್ಟಿಂಗ್ ಮಾಡುವ ಜೊತೆಗೆ ರಸ್ತೆಯ ಪಕ್ಕದಲ್ಲಿ ಮತ್ತು ಮಧ್ಯದಲ್ಲಿ ಕೆಲವು ಕಡೆ ಪೇವರ್ ಅಳವಡಿಸಿ ಅಗತ್ಯವಾದಾಗ ತೆಗೆಯಲು ಅನುಕೂಲ ಕಲ್ಪಿಸಲಾಗುವುದು.
ನಿರಂತರ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಎಲ್ಲ ರೀತಿಯ ಸಹಕಾರ ನೀಡಲಿದೆ. ಪಾಲಿಕೆ ತನ್ನ ಪಾಲಿನ ಹಣವನ್ನು ಭರಿಸುವುದಕ್ಕೂ ಸಿದ್ಧವಾಗಿದೆ.
-ಶಶಿಧರ ಕುರೇರ, ಮಹಾನಗರ ಪಾಲಿಕೆ ಆಯುಕ್ತ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ. ಜೊತೆಗೆ ನಿರಂತರವಾಗಿ ಸುದ್ದಿಗಳನ್ನು ಪಡೆಯಲು ಲಿಂಕ್ ಓಪನ್ ಮಾಡಿದಾಗ
ಕಾಣುವ ಬೆಲ್ ಐಕಾನ್ ಒತ್ತಿ ಉಚಿತವಾಗಿ ಸಬ್ ಸ್ಕ್ರೈಬ್ ಆಗಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ