ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗೋಗಟೆವೃತ್ತದ ರೈಲ್ವೆ ಮೇಲ್ಸೆತುವೆ ಸಂಚಾರಕ್ಕೆ ಮುಕ್ತವಾಗಿ ಸಂಚಾರ ದಟ್ಟಣೆಯಿಂದ ನೆಮ್ಮದಿಯ ಖುಷಿಯಲ್ಲಿದ್ದ ಬೆಳಗಾವಿ ಜನರಿಗೆ ಮತ್ತೆ ಶಾಕ್.
ಮತ್ತೊಂದೆಡೆ ನಿತ್ಯ ರೈಲ್ವೆ ಗೇಟ್ ನಲ್ಲಿ ಕಾದು ಕಾದು ಸುಸ್ತಾದವರಿಗೆ ಇನ್ನು 18-24 ತಿಂಗಳಲ್ಲಾದರೂ ಬಿಡುಗಡೆಯಾಗಲಿದೆ ಎನ್ನುವ ಖುಷಿ.
ಇದಕ್ಕೆ ಕಾರಣ ಭಾನುವಾರ 3ನೇ ರೈಲ್ವೆ ಗೇಟ್ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ದಕ್ಷಿಣ ಮಧ್ಯ ರೈಲ್ವೆ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜಿಸಿದೆ.
ಬಹುವರ್ಷಗಳ ಬೇಡಿಕೆಯಾದ 3ನೇ ರೈಲ್ವೆ ಗೇಟ್ ಮೇಲ್ಸೆತುವೆ ಕಾಮಗಾರಿ ಇಷ್ಟರಲ್ಲೇ ಆರಭವಾಗಲಿದ್ದು, ಭಾನುವಾರ ಪೂಜೆ ನೆರವೇರಲಿದೆ. ಲೋಕಸಭಾ ಸದಸ್ಯ ಸುರೇಶ ಅಂಗಡಿ ಪೂಜೆ ನೆರವೇರಿಸಲಿದ್ದು, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಸತೀಶ್ ಜಾರಕಿಹೊಳಿ ಮತ್ತು ಮೇಯರ್ ಬಸಪ್ಪ ಚಿಕ್ಕಲದಿನ್ನಿ ಮುಖ್ಯ ಅತಿಥಿಯಾಗಿ ಆಗಮಿಸುವರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅನಿಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ವಿವೇಕರಾವ್ ಪಾಟೀಲ, ಅರುಣ ಶಹಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ.
ಕಾಮಗಾರಿ ಟೆಂಡರ್ ವಿವರ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಗುತ್ತಿಗೆದಾರರಿಗೆ 18-24 ತಿಂಗಳು ಸಮಯಾವಕಾಶ ನೀಡಲಾಗುತ್ತದೆ. ಅಲ್ಲಿಯವರೆಗೆ ಖಾನಾಪುರ ಕಡೆಯಿಂದ ಬರುವವರಿಗೆ 2ನೇ ರೈಲ್ವೆ ಗೇಟ್ ಮೂಲಕ ಆರ್ ಪಿಡಿ ಕಡೆಗೆ ಹೋಗಲು ಅನುವು ಮಾಡಿಕೊಡಬಹುದು. ಮತ್ತೆ ಕಾಂಗ್ರೆಸ್ ರಸ್ತೆ ಸಂಚಾರ ದಟ್ಟಣೆಯಿಂದ ನಲುಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ