Latest

ಬೆಳೆಯುತ್ತಿರುವ ಬೆಳಗಾವಿ ಇನ್ನಷ್ಟು ವಿಮಾನ ಸೇವೆಗೆ ಅರ್ಹವಾಗಿದೆ -ಜಯಂತ ಸಿನ್ಹಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು ಹೆಚ್ಚಿನ ವಿಮಾನ ಸೇವೆಗೆ ಇಲ್ಲಿಯ ವಿಮಾನ ನಿಲ್ದಾಣ ನಿಜವಾಗಿಯೂ ಅರ್ಹವಾಗಿದೆ ಎಂದು ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ ಪ್ರಬುದ್ಧ ಭಾರತ ಸಂಘಟನೆಯ ಸ್ಟೆಪ್-2018 ಸಮಾವೇಶದ ಮುಕ್ತ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. 
ಉಡಾನ್ ಯೋಜನೆಯಲ್ಲಿ ಬೆಳಗಾವಿಯನ್ನು ಸೇರಿಸುವ ಮೂಲಕ ಇಲ್ಲಿಗೆ ನೀಡಬೇಕಾದ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ 34 ಹೊಸ ವಿಮಾನ ನಿಲ್ದಾಣಗಳನ್ನು, 51 ಹೆಲಿಪ್ಯಾಡ್ ಗಳನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನ ಹೆಚ್ಚಿಸುವ ಬದಲು ಕೆಲವನ್ನು ಹುಬ್ಬಳ್ಳಿ, ಬೆಳಗಾವಿಯಂತದ ಪ್ರದೇಶಕ್ಕೆ ವಿಸ್ತರಿಸಲಾಗುವುದು. ಇದರಿಂದ ಸಂಪರ್ಕ ಕ್ರಾಂತಿ ಸಾಧ್ಯವಾಗುತ್ತದೆ. ಈ ಪ್ರದೇಶದ ಬೆಳವಣಿಗೆಯೂ ಸಾಧ್ಯವಾಗುತ್ತದೆ. ಟೆಲಿಕಾಂ ನಂತೆಯೇ ನಮ್ಮ ಸರಕಾರ ಬಂದ ಮೇಲೆ ಕನೆಕ್ಟಿವಿಟಿಯಲ್ಲೂ ದೊಡ್ಡ ಕ್ರಾಂತಿ ಮಾಡಿದೆ ಎಂದು ಸಿನ್ಹಾ ಹೇಳಿದರು. 
ಏರ್ ಇಂಡಿಯಾ ಶೇರ್ ಗಳ ಮಾರಾಟಕ್ಕೆ ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಬಲಪಡಿಸಲು ನಿರ್ಧರಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಶೇ.49ಕ್ಕಿಂತ ಹೆಚ್ಚು ವಿದೇಶಿ ಬಂಡವಾಳಕ್ಕೆ ನಾವು ಸಿದ್ಧರಿಲ್ಲ ಎಂದ ಅವರು, ವಿಮಾನ ದರ ವಿಶ್ವದಲ್ಲೇ ಭಾರತದಲ್ಲಿ ಅತ್ಯಂತ ಕಡಿಮೆ ಇದೆ. ಮತ್ತಷ್ಟು ಇಳಿಸಲು ಸಾಧ್ಯವಿಲ್ಲ. ಅದರ ಬದಲು ಹೆಚ್ಚಿನ ಆಯ್ಕೆಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.
ಹಿಂದಿನ ಎಲ್ಲ ಸರಕಾರಗಳಿಗಿಂತ ನಮ್ಮ ಸರಕಾರ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದೆ. ಇನ್ನು ಮುಂದೆ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲದರಲ್ಲೂ ದೊಡ್ಡ ಕ್ರಾಂತಿಯೇ ಆಗಿದೆ. ಆದರೆ ಜನರಲ್ಲಿ ಕಶಲ್ಯವಿಲ್ಲದಿದ್ದರೆ ಉತ್ತಮ ಉದ್ಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಜನರ ಕೌಶಲ್ಯ ಹೆಚ್ಚಿಸಲು ಆದ್ಯತೆ ನೀಡಿದಾಗ ನಮ್ಮ ಪ್ರೊಡಕ್ಟಿವಿಟಿ ಹೆಚ್ಚಾಗುತ್ತದೆ. ಆ ದಿಸೆಯಲ್ಲಿ ನಮ್ಮ ಹೆಜ್ಜೆ ಎಂದು ಜಯಂತ್ ಸಿನ್ಹಾ ಹೇಳಿದರು.
ಎಥೆನಾಲ್ ಬಳಕೆ
ವಿಮಾನಕ್ಕೆ ಎಥೆನಾಲ್ ಬಳಕೆಗೆ ಸಿದ್ಧ ಎಂದು ಘೋಷಿಸಿದ ಜಯಂತ್ ಸಿನ್ಹಾ, ಸಾಕಷ್ಟು ಪ್ರಮಣದಲ್ಲಿ ಎಥೆನಾಲ್ ಉತ್ಪಾದನೆಗೆ ಮುಂದೆ ಬರಬೇಕು. ಅಂತವರೊಂದಿಗೆ ಸರಕಾರ ಒಪ್ಪಂದ ಮಾಡಿಕೊಳ್ಳಲಿದೆ. ಇದರಿಂದ ಆರ್ಥಿಕ ಉಳಿತಾಯ ಸಾಧ್ಯ ಎಂದರು.
ಲೇಖಕಿ ಶುಭರಸ್ತಾ ಗೋಷ್ಠಿ ಸಂಯೋಜಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button