ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ವಿಪಕ್ಷ ಬಿಜೆಪಿ ನಾಯಕರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಭಿಕ್ಷೆ ಬೇಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕ ಎಸ್. ರಘು, ಸಂಸದರಾದ ಪಿ.ಸಿ. ಮೋಹನ್ ಮತ್ತು ಬ್ರಿಜೇಶ್ ಚೌಟ ಹಾಗೂ ನಾಯಕ ಅರವಿಂದ್ ಬೆಲ್ಲದ್ ಹಾಗೂ ಬಿಜೆಪಿ ಕಾರ್ಯಕರ್ತರು ಮೆಜೆಸ್ಟಿಕ್ ನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹಾಅಗೂ ಸಚಿವ ಭೈರತಿ ಸುರೇಶ್ ಅವರ ಮುಖವಾಡ ಧರಿಸಿ ಕೈಯಲ್ಲಿ ಪಾತ್ರೆ ಹಿಡಿದು ಭಿಕ್ಷಾಟನೆ ಮಾಡಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಸೇರಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುವ ಬದಲು, ಭಿಕ್ಷೆ ಬೇಡುವ ಹಾಡುಗಳನ್ನು ಹಾಡುತ್ತಾ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.
ಈ ವೇಳೆ ಇಬ್ಬರು ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಮುಖವಾಡ ಧರಿಸಿ, ‘ದಿವಾಳಿ ಸರ್ಕಾರ’ ಎಂದು ಸಾಂಕೇತಿಕವಾಗಿ ಭಿಕ್ಷೆ ಬೇಡಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಆರ್. ಅಶೋಕ್ ಅವರು ಬಸ್ ಪ್ರಯಾಣಿಕರಿಗೆ ಗುಲಾಬಿ ಹೂಗಳನ್ನು ನೀಡಿ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೆಎಸ್ಆರ್ಟಿಸಿ ನಿಲ್ದಾಣದೊಳಗೆ ಬಸ್ಸುಗಳ ಎದುರು ಕುಳಿತು ಘೋಷಣೆ ಕೂಗುತ್ತಿದ್ದ ಆರ್. ಅಶೋಕ್, ಛಲವಾದಿ ಮತ್ತು ರವಿಕುಮಾರ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ನಾಯಕರನ್ನು ಬಸ್ನಲ್ಲಿ ಕರೆದೊಯ್ಯುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಪೊಲೀಸರ ನಡವಳಿಕೆಯನ್ನು ಖಂಡಿಸಿ ರವಿಕುಮಾರ್ ಅವರು ಬಸ್ನಿಂದ ಇಳಿದು ರಸ್ತೆಯಲ್ಲೇ ಕುಳಿತು ಕೆಲಕಾಲ ಧರಣಿ ನಡೆಸಿದರು.




