ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಚುನಾವಣೆ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಆದೇಶದನ್ವಯ ಜಿಲ್ಲೆಯಲ್ಲಿ ೨೦೧೮ ರ ಅಕ್ಟೋಬರ ೧೦ ರಿಂದ ನವೆಂಬರ ೨೫ ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಒಟ್ಟು ೩೭,೨೨,೦೩೪ ಮತದಾರರನ್ನು ಗುರುತಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಬುಧವಾರ ಜಿಲ್ಲೆಯ ೧೮ ವಿಧಾನಸಭಾ ಮತಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದರು. ಪುರುಷ ಮತದಾರರ ಸಂಖ್ಯೆ ೧೮,೮೭,೨೮೩ ಹಾಗೂ ಮಹಿಳಾ ಮತದಾರರ ಸಂಖ್ಯೆ ೧೮,೩೪,೭೫೧ ಇದ್ದು ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತ ೯೭೨ ಇರುತ್ತದೆ. ಮುಖ್ಯ ಚುನವಣಾಧಿಕಾರಿಗಳ ನಿರ್ದೇಶನದಂತೆ ಗ್ರಾಮಿಣ ಪ್ರದೇಶದಲ್ಲಿ ೧,೩೦೦ ಹಾಗೂ ನಗರ ಪ್ರದೇಶಗಳಲ್ಲಿ ೧,೪೦೦ ಮತದಾರರಕ್ಕಿಂತ ಹೆಚ್ಚಿರುವ ಮತಗಟ್ಟೆಗಳನ್ನು ಬೇರ್ಪಡಿಸಿ ಹೊಸ ಮತಗಟ್ಟೆಯನ್ನಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ.
ಜಿಲ್ಲೆಯಲ್ಲಿ ಮತಗಟ್ಟೆಗಳ ರ‍್ಯಾಶನಲೈಜೇಶನ್ ಪೂರ್ವ ೪,೪೦೮ ಮತಗಟ್ಟೆಗಳಿದ್ದು, ರ‍್ಯಾಶನಲೈಜೇಶನ್ ನಂತರ ೪,೪೩೪ ಮತಗಟ್ಟೆಗಳಾಗಿರತ್ತವೆ. ಒಟ್ಟು ೨೬ ಮತಗಟ್ಟೆಗಳು ಹೊಸದಾಗಿ ರಚಿಸಲ್ಪಟ್ಟಿವೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂಧರ್ಭದಲ್ಲಿ ಒಟ್ಟು ೬೬,೯೦೧ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದು, ಖಾಯಂ ಆಗಿ ಸ್ಥಳಾಂತರಗೊಂಡಂತಹ ೧,೬೦೦ ಮತದಾರರನ್ನು ಕೈಬಿಡಲಾಗಿದೆ. ಇದು ಅಂತಿಮ ಮತದಾರರ ಪಟ್ಟಿಯಾಗಿದ್ದರೂ ಕೂಡಾ ನಾಮಪತ್ರ ಸಲ್ಲಿಕೆಯ ಕೊನೆಯ ಹಂತದವರೆಗೆ ಮತದಾರರ ಹೆಸರು ಸೇರಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಹೇಳಿದರು.
ಮತದಾರರಿಗೆ ಮಾಹಿತಿ ನೀಡಲು ಉಚಿತ ಸಹಾಯವಾಣಿ ಸಂಖ್ಯೆ ೧೯೫೦ ಗೆ ಚಾಲನೆ ನೀಡಲಾಗಿದ್ದು, ಈ ನಂಬರಗೆ ಸಂಬಂಧಪಟ್ಟ ಜಿಲ್ಲೆಯ ಮತದಾರರು ತಮ್ಮ ಜಿಲ್ಲೆಯ ಪಿನ್‌ಕೋಡ್ ಸಂಖ್ಯೆ ಬಳಸಿ ಕರೆ ಮಾಡಿ ಮಾಹಿತಿ ಪಡೆಯಬಹುದು. [ಉದಾ. ಬೆಳಗಾವಿ ಜಿಲ್ಲೆಯವರು ೦೮೩೧೧೯೫೦ ಈ ಟೈಪ್ ಮಾಡಿ ಕೆರೆ ಮಾಡಬಹುದು] ಹಾಗೂ ೮೨೭೭೮೧೬೧೫೪ ಮೊಬೈಲ್ ಸಂಖ್ಯೆಗೆ ಎಸ್.ಎಮ್.ಎಸ್. ಮುಖಾಂತರ ಚುನಾವಣೆಗೆ ಸಂಬಂಧಿಸಿದ ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ೨,೨೦೦ ಮತದಾರರನ್ನು ಬಿಟ್ಟರೆ ಉಳಿದೆಲ್ಲ ಮತದಾರರ ಭಾವಚಿತ್ರಗಳು ಮತದಾರರ ಪಟ್ಟಿಯಲ್ಲಿ ಲಭ್ಯವಾಗಿವೆ. ಜನವರಿ ೨೫ ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸುವ ಸಂದರ್ಭದಲ್ಲಿ ಮತದಾರರ ಚೀಟಿ ಕೊಡುವ ವ್ಯವಸ್ಥೆ ಕೂಡಾ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಬಿ ಬೂದೆಪ್ಪ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ