ಬೆಳಗಿನ ವ್ಯಾಪಾರ
ನೀತಾ ರಾವ್
ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದಾಗ ಕೈಬೀಸಿ ಕರೆಯುತ್ತಿರುವ ಮನೆಗೆಲಸಗಳ ಸಾಲೇ ಇರುವಾಗ, ಅಡುಗೆಮನೆಯ ಡಬ್ಬಗಳಲ್ಲಿ ಯಾವುದು ತುಂಬಿದೆ, ಯಾವುದು ಖಾಲಿಯಾಗಿದೆ ಎನ್ನುವುದೂ ಮರೆತು ಹೋಗುವ ಪ್ರಸಂಗಗಳು ಹಲವಾರು. ಬೆಳಗ್ಗೆ ಎದ್ದು ಚಪಾತಿಗೆ ಹಿಟ್ಟು ಕಲಸಲು ಡಬ್ಬ ತೆರೆದಾಗಲೇ ತಿಳಿದಿದ್ದು, ಹಿಟ್ಟು ಖಾಲಿ! ತಿಂಗಳಿಗೊಂದು ಸಾರಿ ಪಟ್ಟಿ ಮಾಡಿ ಕರಾರುವಕ್ಕಾಗಿ ಸಾಮಾನುಗಳನ್ನು ತರಿಸಿದರೂ, ಶೋಕಿಗಾಗಿ ಮಾಲ್ ಗಳಲ್ಲಿ ಆಗೀಗ ಖರೀದಿ ಮಾಡಿದರೂ, ನಮ್ಮ ನೆನಪಿಗೆ ಮೋಸ ಮಾಡುವಂತೆ, ಹೇಗೋ ಸಾಮಾನುಗಳು ಯಾವ ಮಾಯದಲ್ಲೋ ಮುಗಿದು ಹೋಗಿರುತ್ತವೆ. ತುಸು ಬೇಜಾರಿನಿಂದಲೇ ಗಡಿಬಿಡಿಯಲ್ಲಿ ಸಲ್ವಾರ ಧರಿಸಿ ಮನೆಯ ಹತ್ತಿರದ ಗೂಡಿನಂಥ ಪುಟ್ಟ ಅಂಗಡಿಗೆ ಓಡುತ್ತೇನೆ. ಬೆಳ್ಳಂಬೆಳಗ್ಗೆ ಹೀಗೆ ಅರ್ಜೆಂಟಿಗೆ ಏನಾದರೂ ಸಾಮಾನು ಬೇಕೆಂದರೆ ಈ ಪುಟ್ಟ ಅಂಗಡಿಯವನೇ ನಮ್ಮ ಆಪದ್ಬಾಂಧವ. ಬೆಳಗ್ಗೆ ಆರೂವರೆ ಏಳಕ್ಕೆಲ್ಲ ಬಾಗಿಲು ತೆಗೆದು ಸಣ್ಣಪುಟ್ಟ ಪ್ಯಾಪಾರ ಮಾಡುತ್ತಲೇ ಹಗಲನ್ನು ರಾತ್ರಿ ಮಾಡುವ ಈ ಅಂಗಡಿಕಾರನಿಗೆ ಓಣಿಯವರೆಲ್ಲ ಋಣಿಯಾಗಿರಲೇಬೇಕು.
ಸರಿ, ಬೆಳಗ್ಗೆ ಏಳಕ್ಕೇ ನಾನು ಈ ಮಹಾತ್ಮನ ಅಂಗಡಿಯ ಬಾಗಿಲಿಗೆ ಹೋಗಿ ನಿಂತಾಗ, ಆಗ ತಾನೇ ಬಾಗಿಲು ತೆರೆದು ಕಸ ಗುಡಿಸುತ್ತಿದ್ದವ ಸ್ವಾಗತ ನೀಡುವಂತೆ ಒಂದು ಸಣ್ಣ ಸ್ಮೈಲ್ ಕೊಟ್ಟ. ರಾತ್ರಿಯೆಲ್ಲಾ ಒಳಗೇ ಇತ್ತೇನೋ – ಬೆಕ್ಕೊಂದು ಮಿಯಾಂ ಮಿಯಾಂ ಎನ್ನುತ್ತ ಅವನ ಹಿಂದೆ ಮುಂದೆಯೇ ಸುತ್ತುವರೆಯಲಾರಂಭಿಸಿತು. ಹುಷ್ ಹುಷ್ ಎನ್ನುತ್ತಲೇ ಅದೇನೂ ಹೋಗಲೇಬೇಕೆಂಬ ಅಭಿಲಾಷೆಯನ್ನೂ ಪ್ರಕಟ ಪಡಿಸದೇ ಆತ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಬಹುಷಃ ಇದು ಅವರಿಬ್ಬರ ದಿನನಿತ್ಯದ ಆಟವಾಗಿರಬಹುದು.
ಕೈ ತೊಳೆದುಕೊಂಡವ ಒಂದೊಂದೇ ಡಬ್ಬವನ್ನು ಅಂಗಡಿಯ ಮುಂದೆ ಓರಣವಾಗಿ ಹಚ್ಚತೊಡಗಿದ. ಅಷ್ಟರಲ್ಲಿಯೇ ಎರಡು ರೂಪಾಯಿಯ ಶಾಂಪೂ ಪ್ಯಾಕೆಟ್ ಬೇಕೆಂದು ಹತ್ತೊಂಬತ್ತು-ಇಪ್ಪತ್ತು ವರ್ಷದ ಹುಡುಗಿಯೊಬ್ಬಳು ನೈಟಿಯ ಮೇಲೆಯೇ ಬಂದು ವಯ್ಯಾರ ಮಾಡುತ್ತ ನಿಂತಳು. ಅಂಗಡಿಯವ ತನ್ನ ಕೆಲಸವನ್ನೇ ಇನ್ನೂ ಮುಂದುವರೆಸಿದ್ದ. ಹಾಗೆ ಡಬ್ಬಗಳನ್ನೆಲ್ಲ ಹೊರಗೆ ಜೋಡಿಸಲಾರದೇ ಒಳಗಿನಿಂದ ಯಾವುದೇ ಸಾಮಾನನ್ನೂ ತೆಗೆದು ಕೊಡುವುದು ಅವನಿಂದ ಸಾಧ್ಯವಿರಲಿಲ್ಲ. ಅಂಥ ಪುಟ್ಟ ಗೂಡಂಗಡಿ ಅದು. ಸರಿ, ಇಪ್ಪತೈದರ ಆಸುಪಾಸಿನ ಹುಡುಗನೊಬ್ಬ ನಿದ್ದೆಗಣ್ಣಲ್ಲೇ ಎದ್ದುಬಂದಂತೆ ತೇಲಾಡುತ್ತ ಬಂದು ಒಂದು ಪ್ಯಾಕೆಟ್ ಪಾನ್ ಮಸಾಲಾ, ಒಂದು ಮೈಸೋಪು ಬೇಕೆಂದ. ಹುಡುಗಿಯನ್ನು ನೋಡುತ್ತಲೇ ಅವನ ನಿದ್ದೆಯ ಜೊಂಪು ಹಾರಿಹೋಯಿತು. ನಿಂತಲ್ಲೇ ಹಾಡೊಂದನ್ನು ಗುಣುಗುಣಿಸುತ್ತಾ ಸ್ಟೈಲ್ ಕೊಡಲಾರಂಭಿಸಿದ. ಹುಡುಗಿಯ ಕಣ್ಣುಗಳೂ ನಗುನಗುತ್ತಲೇ ಅವನ ಸ್ಟೈಲನ್ನೂ, ಸ್ಮೈಲನ್ನೂ ಸ್ವಾಗತಿಸುತ್ತಿವೆ ಎಂಬ ಅನುಮಾನ ನಂಗೆ. ಒಟ್ಟು ಒಂದು ಸಂವಹನ ಅವರಿಬ್ಬರ ಮಧ್ಯೆ ಮಾತಿನ ಹಂಗಿಲ್ಲದೇ ಸೇತುವೆ ಕಟ್ಟುತ್ತಿತ್ತು. ಇಬ್ಬರಿಗೂ ಗಡಿಬಿಡಿ ಇರಲಿಲ್ಲ. ಇದ್ದ ನನಗೂ ಅಲ್ಲಿನ ವ್ಯಾಪಾರದ ಗುಂಗು ಹಿಡಿದಿತ್ತು. ಐವತ್ತರ ವಯಸ್ಸಿನವನೊಬ್ಬ ಬೆಳ್ಳಂಬೆಳಿಗ್ಗೆ ಸಿಗರೇಟಿನ ಬೇಡಿಕೆಯಿಟ್ಟ. ಎಲ್ಲವೂ ಕಿರಕೋಳ ವ್ಯಾಪಾರಗಳು.
“ಮೇಡಂ ನಿಮಗೇನು ಬೇಕು” ಎಂದು ಅಂಗಡಿಯವನು ಕೇಳಿದಾಗಲೇ ವಾಸ್ತವಕ್ಕೆ ಬಂದೆ. ಗೋದಿಹಿಟ್ಟನ್ನು ಅವನು ಕೊಡುತ್ತಿರುವಾಗಲೇ ಪುಟ್ಟ ಹುಡುಗನೊಬ್ಬ “ಧೋಂಡಿಬಾ ಎರಡು ಚಾಕಲೇಟು ಕೊಡು” ಎಂದು ಒಂದು ರೂಪಾಯಿಯ ನಾಣ್ಯವನ್ನು ಮುಂದೆ ಚಾಚಿದ. ಮಹಿಳೆಯೊಬ್ಬಳು ಐದು ರೂಪಾಯಿಯ ಚಹಾಪುಡಿ ಬೇಕೆಂದಳು. ಕಾಲು ಕೇಜಿ ಶೇಂಗಾ ಎಣ್ಣೆಗಾಗಿ ಸಣ್ಣದೊಂದು ಡಬ್ಬವನ್ನೂ ತಂದಿದ್ದಳು. ಅಂಗಡಿಯವನ ಬೆಳಗಿನ ವ್ಯಾಪಾರದ ಮಜವನ್ನು ನೋಡಿ ನಗು ಬಂತು. ಖುಷಿಯೂ ಆಯಿತು. ಬೆಳಗಿನ ವ್ಯಾಪಾರದ ಜೊತೆಜೊತೆಗೆ ಇನ್ನೂ ಏನೇನೋ ವ್ಯಾಪಾರ ವ್ಯವಹಾರಗಳು ನಡೆಯುವ ಗಮ್ಮತ್ತು, ಪುರುಸೊತ್ತು ಮಾಡಿಕೊಂಡು ನಿಂತು ನೋಡುವವರಿಗೆ ಮಾತ್ರ ಗೋಚರಿಸುವ ಗುಪ್ತಗಾಮಿನಿಗಳು. ವೈವಿಧ್ಯಮಯವಾಗಿರುವ ಈ ದೇಶದಲ್ಲಿ ಬರೀ ಮೇಲ್ಪದರದ ವರ್ಗಗಳ, ಜನಗಳ ಖುಷಿಗಾಗಿ ತೆರೆದ ಮಾಲ್ ಗಳು, ರಿಟೇಲ್ ಮಳಿಗೆಗಳು ಸಾಲುಸಾಲಾಗಿ ಬಂದರೂ ನಮ್ಮ ಗೂಡಂಗಡಿಯ ’ಧೋಂಡಿಬಾ’ನಂಥವರ ವ್ಯಾಪಾರ ಯಾವುದೇ ಹಂಗು ಹೆದರಿಕೆಯಿಲ್ಲದೇ ನಡೆಯುತ್ತಲೇ ಇರುತ್ತದೆ. ಇದೀಗ ಸಾವಿರ ಸಾವಿರ ಜನರು ಮಾಲ್ ಗಳಿಗೆ ಭೇಟಿ ಕೊಡುತ್ತಿರಬಹುದು. ಅಲ್ಲವರಿಗೆ ಹತ್ತು ಹಲವು ಆಕರ್ಷಣೆಗಳು ಕೈಬೀಸಿ ಕರೆಯುತ್ತಿರಬಹುದು. ಆದರೆ ಸಣ್ಣ ಆದಾಯದ ಲಕ್ಷಾಂತರ ಜನರು ತಮ್ಮ ಬೆಳಗಿನ ಬೇಡಿಕೆಗಳಿಗೆ ಆಶ್ರಯಿಸುವುದು ಇಂಥ ಪುಟ್ಟ ಅಂಗಡಿಗಳನ್ನೇ. ಇಂಥಲ್ಲೇ ಹರೆಯದ ಹುಡುಗರ ಮೌನ ವಿನಿಮಯಗಳು ನಡೆದು ಮಿಂಚಿನ ಸಂಚಾರವಾಗಿ, ಮತ್ತೆ ನಾಳೆ ಇಲ್ಲಿಯೇ ಭೇಟಿಯಾಗುವ ಸಂದೇಶಗಳು ಆ ಕಣ್ಣಿನಿಂದ ಈ ಕಣ್ಣಿಗೆ ರವಾನೆಯಾಗುವುದು. ಇಂಥ ಅಂಗಡಿಗಳಲ್ಲೇ, ಚಹಾಪುಡಿ ತೀರಿದ ಮನೆಗಳಲ್ಲಿ ಬೆಳಿಗ್ಗೆ ಎದ್ದೊಡನೇ ಚಹಾ ಕುಡಿಯುವ ಆಸೆಯಾದರೆ ಐದು ರೂಪಾಯಿಗೂ ಚಹಾಪುಡಿ ಸಿಗುವುದು. ಇಲ್ಲಿಯೇ ಬೆಕ್ಕುಗಳು ಮಿಯಾಂ ಮಿಯಾಂ ಎನ್ನುತ್ತಾ ಕಾಲುಕಾಲಲ್ಲಿ ಅಡ್ಡಾಡುತ್ತಾ ತಮ್ಮ ಹಸಿದ ಹೊಟ್ಟೆಗೆ ಏನಾದರೂ ಸಿಗುತ್ತಾ ಎಂದು ಅರಸುವುದು, ಮತ್ತು ಇಲ್ಲಿಯೇ ಲಬ್ ಡಬ್ ಎನ್ನುತ್ತ ಸುತ್ತುವರೆಯುವವು, ಶ್ರೀಮಂತ ದೇಶದ ಬಡ ಹೃದಯಗಳು!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ