Latest

ವಿಟಿಯು ವಿಭಜನೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಪ್ರಗತಿವಾಹಿನಿ ಆರಂಭಿಸಿರುವ ಆಂದೋಲನ ಬೆಂಬಲಿಸಿ, ವಿಟಿಯು ವಿಭಜಿಸುವ ರಾಜ್ಯ ಸರಕಾರದ ಪ್ರಸ್ತಾವನೆಗೆ ದಿನೇ ದಿನೇ ವಿರೋಧ ಹೆಚ್ಚಾಗುತ್ತಿದ್ದು, ಮಂಗಳವಾರ ಹಲವಾರು ಸಂಘಟನೆಗಳ ಸದಸ್ಯರು ವಿಟಿಯು ವಿಭಜನೆ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಲಾಪದಿಂದ ದೂರವುಳಿದು ವಕೀಲರ ಪ್ರತಿಭಟನೆ :
ವಿಟಿಯು ವಿಭಜನೆ ಖಂಡಿಸಿ ಹಾಗೂ ಇನ್ನೂ ಕೆಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಕೀಲರು ನ್ಯಾಯಾಲಯ ಕಲಾಪದಿಂದ ದೂರವುಳಿದು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಡಿಸಿ ಕಚೇರಿ ಆವರಣದಲ್ಲಿ ಜಮಾಯಿಸಿದ ವಕೀಲರ ಸಂಘದ ಸದಸ್ಯರು ವಿಟಿಯು ವಿಭಜನೆ ಮಾಡದಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ, ಉಪಾಧ್ಯಕ್ಷ ಮುರುಘೇಂದ್ರ ಗೌಡ ಪಾಟೀಲ, ಎಂ.ಬಿ. ಝಿರಲಿ ಮುಂತಾದವರು ಭಾಗವಹಿಸಿದ್ದರು.
ಸಾಹಿತಿಗಳ ವತಿಯಿಂದ :
ವಿಟಿಯು ವಿಭಜನೆ ವಿರೋಧಿಸಿ ಬೆಳಗಾವಿಯ ಸಾಹಿತಿಗಳು ಮಂಗಳವಾರ ಬೆಳಗ್ಗೆ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿದರು. ವಿಟಿಯು ಬೆಳಗಾವಿಯ ಹೋರಾಟಗಾರರ, ಸಾಹಿತಿಗಳ ಹಾಗೂ ಕಲಾವಿದರ ಹೋರಾಟದಿಂದ ಬೆಳಗಾವಿಗೆ ಸಿಕ್ಕಿರುವ ಕೊಡುಗೆಯಾಗಿದೆ. ಇದನ್ನು ವಿಭಜಿಸುವುದು ಎಂದರೆ ಗಡಿಭಾಗದ ಕನ್ನಡಿಗರಿಗೆ ಅವಮಾನ ಮಾಡಿದಂತೆ. ತಕ್ಷಣ ಸರಕಾರ ವಿಟಿಯು ವಿಭಜನೆಯ ಪ್ರಸ್ತಾಪವನ್ನು ಕೈಬಿಡದಿದ್ದರೆ ಮುಂದಾಗುವ ಅನಾಹುತಗಳಿಗೆ ಸರಕಾರವೇ ಹೊಣೆಯಾಗುತ್ತದೆ ಎಂದು ಸಾಹಿತಿಗಳು ಎಚ್ಚರಿಸಿದರು. ನಂತರ ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಹಿತಿಗಳಾದ ಚಂದ್ರಕಾಂತ ಪೋಕಳೆ, ಸರಜೂ ಕಾಟ್ಕರ, ಡಿ.ಎಸ್. ಚೌಗುಲೆ, ಬಿ.ಎಸ್. ಗವಿಮಠ, ಆಶಾ ಕಡಪಟ್ಟಿ, ರಾಮಕೃಷ್ಣ ಮರಾಠೆ, ಸುಭಾಷ ಏಣಗಿ, ಶಶಿಧರ ಘಿವಾರಿ, ಜ್ಯೋತಿ ಬದಾಮಿ, ಬಸವರಾಜ ಜಗಜಂಪಿ ಇದ್ದರು.
ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ :
ವಿಟಿಯು ವಿಭಜನೆ ಖಂಡಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಮಧ್ಯಾಹ್ನ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಧರಣಿ ಪ್ರತಿಭಟನೆ ನಡೆಸಿದರು. ವಿಟಿಯು ವಿಭಜಿಸುವ ಕ್ರಮ ಖಂಡಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಅಡಿವೇಶ ಇಟಗಿ, ವಿಟಿಯು ವಿಭಜಿಸಿ ಹಾಸನದಲ್ಲಿ ಮತ್ತೊಂದು ವಿಟಿಯು ಸ್ಥಾಪಿಸುವ ನಿರ್ಧಾರದಿಂದ ಸರಕಾರ ಈ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button