ಪ್ರಗತಿವಾಹಿನಿ ಸುದ್ದಿ, ಕಿತ್ತೂರು.
ಚನ್ನಮ್ಮನ ಕಿತ್ತೂರು ಮತಕ್ಷೇತ್ರದಲ್ಲಿ ಬರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ೨೦೧೯ರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ಹಾಗೂ ನ್ಯೂನ್ಯತೆಗಳ ಪರಿಹಾರ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸ್ಥಳೀಯ ಆರ್‌ಜಿಎಸ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಶಾಸಕ ಮಹಾಂತೇಶ ದೊಡ್ಡಗೌಡರ, ಉತ್ತಮ ಫಲಿತಾಂಶ ತರಲು ಶ್ರಮಿಸಿದ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಶ್ರಮ ಅಭಿನಂದನೀಯ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಹಾಗೂ ಜೀವನ ಕೌಶಲ ಬೆಳೆಸಲು ಶ್ರಮ ವಹಿಸಬೇಕೆಂದು ತಿಳಿಸಿದರು.
ಕ್ಷೇತ್ರದ ಸರಕಾರಿ ಕಾಲೇಜುಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಹಾಗೂ ಅಗತ್ಯ ತಂತ್ರಜ್ಞಾನವನ್ನು ಒದಗಿಸಲಾಗುವುದು. ಈ ಭಾಗದ ವಿದ್ಯಾರ್ಥಿಗಳು ವಿಜ್ಞಾನವನ್ನು ಆಸಕ್ತಿಯಿಂದ ಓದಿ ನೀಟ್, ಎಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಬೇಕು ಮತ್ತು ಅದಕ್ಕೆ ಅಗತ್ಯವಿರುವ ಸ್ಪರ್ಧಾತ್ಮಕ ತರಬೇತಿಯನ್ನು ಸಹ ಕೊಡಿಸುವುದಾಗಿ ಶಾಸಕ ದೊಡ್ಡಗೌಡರ ಭರವಸೆ ನೀಡಿದರು.
ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿದರು. ಮುಖ್ಯ ಅತಿಥಿ ಎಸ್‌ಸಿಎಚ್ ಪ್ರತಿಷ್ಠಾನದ ಸಂಸ್ಥಾಪಕ ಮಹಾಂತೇಶ ಹೊಂಗಲ ಸೃಜನಶೀಲ ಬೋಧನೆ ಕುರಿತು ಉಪನ್ಯಾಸ ನೀಡಿದರು.
ಕಿತ್ತೂರು ಕಾಲೇಜಿನ ಪ್ರಾಚಾರ್ಯ ಜಿ.ಎಂ. ಗಣಾಚಾರಿ ಕಿತ್ತೂರು ಮತಕ್ಷೇತ್ರದ ನೇಸರಗಿ, ಸಂಪಗಾಂವ, ವಣ್ಣೂರ, ನಾಗನೂರು, ಹುಣಸಿಕಟ್ಟಿ ಹಾಗೂ ಕಿತ್ತೂರು ಕಾಲೇಜುಗಳ ಫಲಿತಾಂಶದ ವಿಶ್ಲೇಷಣೆ ಮಾಡಿದರು.
ಕನ್ನಡ ಉಪನ್ಯಾಸಕ ವಾಸುದೇವ ಧಾರವಾಡ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ರವೀಂದ್ರ ಬಿರ್ಜಿ ಸ್ವಾಗತಿಸಿದರು. ಗಣಿತ ಉಪನ್ಯಾಸಕ ಜಿ.ಎಂ. ಧೂಪದ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ