ನರ್ಸಿಂಗ್ ಸಮ್ಮೇಳನದಲ್ಲಿ ಡಾ. ವಿವೇಕ ಸಾವೋಜಿ ಅಭಿಮತ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನರ್ಸಿಂಗ್ ಸೇವೆ ಬಹಳ ಮುಖ್ಯವಾದ ಮತ್ತು ವೈದ್ಯಕೀಯ ವ್ಯವಸ್ಥೆಗೆ ಪೂರಕವಾದ ಸೇವೆಯಾಗಿದೆ. ವೈದ್ಯರಿಗಿಂತ ಮುಂಚೆ ರೋಗಿಗಳ ಸಂಪರ್ಕಕ್ಕೆ ಬರುವವರು ಶುಶ್ರೂಶಕರು. ಸಹಜವಾಗಿಯೆ ವೈದ್ಯರು ಮತ್ತು ರೋಗಿಗಳ ಮಧ್ಯೆ ಶುಶ್ರೂಶಕರು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜುಕೇಶನ್ ಮತ್ತು ರಿಸರ್ಚನ ಕುಲಪತಿ ಡಾ. ವಿವೇಕ ಸಾವೋಜಿ ಹೇಳಿದರು.
ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜುಕೇಶನ ಮತ್ತು ರಿಸರ್ಚನ ನರ್ಸಿಂಗ ವಿಜ್ಞಾನ ಮಹಾವಿದ್ಯಾಲಯ, ಭಾರತೀಯ ಕ್ರಿಟಿಕಲ್ ಕೇರ್ ನರ್ಸಿಸ್ ಸೊಸೈಟಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಪ್ರಥಮ ಅಂತಾರಾಷ್ಟ್ರೀಯ ರೀಜನಲ್ ಫೆಡರೇಶನ್ ಆಫ್ ಕ್ರಿಟಿಕಲ್ ಕೇರ್ ನರ್ಸಿಸ್ ಸಾರ್ಕ್ ಸಮ್ಮೇಳನ ಉದ್ಘಾಟಿಸಿ ಮಾತಾಡಿದ ಅವರು, ಈ ರೀತಿಯ ಸಮಾವೇಶಗಳ ಆಯೋಜನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞರು ಚರ್ಚೆಗಳನ್ನು ನಡೆಸಿ ನರ್ಸಿಂಗ್ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಬಹುದು. ವಿಶ್ವದ ಯಾವುದೇ ಮೂಲೆಗೆ ಹೋದರೂ ಭಾರತದ ನರ್ಸ್‌ಗಳು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಎಂದರು.
ಪಿ.ಡಿ. ಹಿಂದುಜಾ ನರ್ಸಿಂಗ್ ಕಾಲೇಜು ಪ್ರಾಚಾರ್‍ಯ ಡಾ. ಜಯಾ ಕುರುವಿಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಸಂಸ್ಥೆ ನಿರ್ದೇಶಕ ಡಾ. ವಿ.ಎಸ್. ಸಾಧುನವರ, ಕೆಎಲ್‌ಇ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚಾರ್‍ಯೆ ಡಾ. ಸುಧಾ ರೆಡ್ಡಿ, ಡಾ. ವಿ.ಡಿ. ಪಾಟೀಲ, ಸಿಂಗಾಪುರದ ವರ್ಲ್ಡ್ ಫೆಡರೇಶನ್ ಆಫ್ ಕ್ರಿಟಿಕಲ್ ಕೇರ್ ನರ್ಸಿಸ್‌ನ ಕಾರ್‍ಯದರ್ಶಿ ಡಾ. ವೈಲೆಟಾ ಲೋಪೆಜ್, ಗೆರಾಲ್ಡ್ ವಿಲಿಯಂ, ಡಾ. ನರೇಂದ್ರ ರುಂಗ್ಟಾ, ನೇಪಾಳದ ಡಾ. ಸುಭಾಷ ಆಚಾರ್‍ಯ ಸೇರಿದಂತೆ ೯ ದೇಶಗಳ ಸುಮಾರು ೮೦೦ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ