Latest

ಶಾಂತವಾದ ಮನಸ್ಸಿನಿಂದ ಸ್ವಸ್ಥ ಜೀವನ -ರಮೇಶ ಬಿಜಲಾನಿ

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮನಸನ್ನು ಹಿಡಿತದಲ್ಲಿಟ್ಟುಕೊಂಡು ಶಾಂತವಾದ ಮನಸನ್ನು ಹೊಂದುವುದರಿಂದ ಸ್ವಸ್ಥ ಜೀವನ ನಡೆಸಲು ಸಾಧ್ಯ. ಜೀವನವೊಂದು ಯಾತ್ರೆ ಇದ್ದಂತೆ ಈ ಯಾತ್ರೆಯನ್ನು ಸುಖ ಮತ್ತು ಸಂತೋಷದಿಂದ ಕ್ರಮಿಸಬೇಕಾದರೇ ಮನಸು ಮತ್ತು ಬುದ್ದಿಯೊಂದಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ನವದೆಹಲಿ ಅರವಿಂದ ಆಶ್ರಮದ ರಮೇಶ ಬಿಜಲಾನಿ ಹೇಳಿದರು.
ಅವರು ಗುರುವಾರ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ದಿ. ಶಿವಬಸವ ಸ್ವಾಮಿಜಿಯವರ 129ನೇ ಜಯಂತಿ ಮಹೋತ್ಸವ ಮತ್ತು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ,ನಾಗನೂರು ರುದ್ರಾಕ್ಷಿ ಮಠ ಅವರ ಗುರುವಂದನ ಕಾರ್ಯಕ್ರಮದ ಅಂಗವಾಗಿ ಎರಡನೇ ದಿನ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ – ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಆತ್ಮಸ್ವಾಸ್ಥ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ರೋಗಗಳು ಬಂದಾಗ ಎಲ್ಲದಕ್ಕೂ ಔಷಧ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವನ್ನು ಉಪಚರಿಸುವ ಹಲವು ವಿಧಾನಗಳು ಮತ್ತು ಶಕ್ತಿ ನಮ್ಮ ದೇಹದಲ್ಲೇ ಇರುತ್ತವೆ. ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವುದೇ ರೋಗಗಳಿಗೆ ಆಹ್ವಾನ ಎಂದ ಅವರು, ದೇಹಕ್ಕೆ ಬೇಡವಾದದ್ದನ್ನು ನೀಡುವುದು, ಸದಾಕಾಲ ಅತಿಯಾದ ಆಸೆಯೊಂದಿಗೆ ಮನಸನ್ನು ಅಶಾಂತಗೊಳಿಸುವುದು ಇವೆಲ್ಲವನ್ನು ತೊರೆದಾಗ ಮಾತ್ರ ಜೀವನಯಾತ್ರೆ ಸುಗಮವಾಗುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
ಆತ್ಮದ ಧ್ವನಿಯನ್ನು ಹೆಚ್ಚೆಚ್ಚು ಕೇಳುವಂತಾದಾಗ ಮನಸ್ಸು ಮತ್ತು ಬುದ್ದಿಗಳು ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯ. ಅದಕ್ಕೆ ಬೇಕು ಎನ್ನುವುದರೊಂದಿಗೆ ಇನ್ನೊಬ್ಬರಿಗೆ ಕೊಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಸಂತಸ ಹೆಚ್ಚುತ್ತದೆ. ಮಾನಸಿಕ ಧೈರ‍್ಯ ಮತ್ತು ವಿಶ್ವಾಸಗಳು ನಮ್ಮ ಜೀವನವನ್ನು ಸಂತಸಮಯಗೊಳಿಸುತ್ತವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಅವರು, ಡಾ:ಬಾಬಾಸಾಹೇಬ ಅಂಬೇಡ್ಕರ ಅವರ ಸದಾಶಯದಂತೆ ಅವರ ಸಮಕಾಲೀನರಾದ ಲಿಂಗೈಕ್ಯ ಡಾ:ಶಿವಬಸವ ಶ್ರೀಗಳು ತಮ್ಮ ಪ್ರಸಾದ ನಿಲಯದಲ್ಲಿ ಎಲ್ಲ ಜಾತಿ ಮತಗಳ ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ವಿದ್ಯಾದಾನ ಮಾಡಿದ್ದಾರೆ. ತನ್ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ತುಳಿತಕ್ಕೊಳಗಾದವರಿಗೆ ಶಿಕ್ಷಣ ನೀಡಲು ಶ್ರಮಿಸಿದ ಸಾವಿತ್ರಿಬಾಯಿ ಫುಲೆ ದಂಪತಿಗಳು ಮತ್ತು ಶಾಹು ಮಹಾರಾಜರನ್ನು ನೆನಪಿಸಿಕೊಂಡ ಅವರು ಇಂಗ್ಲೆಂಡ್ ರಾಣಿಯಿಂದ ಸತ್ಕರಿಸಲ್ಪಟ್ಟ ಫುಲೆ ದಂಪತಿಗಳು ಕೇಳಿದ್ದು ತಮ್ಮ ಜನಕ್ಕೆ ಶಿಕ್ಷಣ ಕೊಡಿಸಿ ಎಂದಿದ್ದನ್ನು ಅವರು ನೆನಪಿಸಿಕೊಂಡರು.
ಚಿನ್ನದ ಪದಕ ವಿಜೇತರಾದ ಬೆಳಗಾವಿಯ ಎಸ್.ಜಿ.ಬಾಳೆಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಸ್ನೇಹಾ ಖೋತ(ಇ & ಸಿ), ಮಿಶಾನಾ ಡಿಸೋಜಾ (ಇ &ಇ), ಕೌಸ್ತುಭ ಶಿಂಧೆ(ಮೆಕ್ಯಾನಿಕಲ್), ಪೂಜಾ ಹಿರೇಕೋಡಿ(ಕಂಪ್ಯುಟರ ಸಾಯನ್ಸ), ಅನುಶ್ರೀ ಜವಳಿ(ಸಿವಿಲ್ ವಿಭಾಗ) ಇವರುಗಳನ್ನು ಬೆಳಗಾವಿಯ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಚಿನ್ನದ ಪದಕ ತೊಡಿಸಿ ಗೌರವಿಸಿದರು.
ಸನ್ಮಾನಿತರ ಪರವಾಗಿ ಬೆಂಗಳೂರಿನ ಕೆ.ವಿ.ನಾಗರಾಜಮೂರ್ತಿ ಅವರು ಮಾತನಾಡಿ, ಇಂದು ನಾಡಿನಲ್ಲಿ ಕನ್ನಡ ಉಳಿದಿದ್ದರೆ ಅದಕ್ಕೆ ಸರಕಾರ ಕಾರಣವಲ್ಲ. ಸಮಾಜದ ಬಡವರಿಗೆ ಶಿಕ್ಷಣ ಮತ್ತು ಅನ್ನ ನೀಡಿದ ಮಠಮಾನ್ಯಗಳು ಕಾರಣ ಎಂದರು.
ಶ್ರೀ ದೇವಪ್ಪಜ್ಜ ಅವರು ಮಾತನಾಡಿ, ಕಳೆದ ಹಲವು ದಶಕಗಳಿಂದ ತಾವು ಕನ್ನಡವನ್ನಲ್ಲದೇ ಒಂದೇ ಒಂದು ಬೇರೆ ಪದವನ್ನು ಬಳಸಿಲ್ಲವೆಂದು ನುಡಿದು ಹಲವು ಸ್ವಾರಸ್ಯಕರ ಪ್ರಸಂಗಗಳನ್ನು ವಿವರಿಸಿದರು.
ಆರ್.ಪಿ.ಅಪರಾಜ ಅವರ ಲಿಂಗಾಯತ ಧರ್ಮಗ್ರಂಥವನ್ನು ಚಿಂಚಣಿಯ ಅಲ್ಲಮಪ್ರಭು ಶ್ರೀಗಳು ಲೋಕಾರ್ಪಣೆಗೊಳಿಸಿದರು. ವಿ.ಕೃ. ಗೋಕಾಕರ ಕೊನೆಯ ದಿನಗ್ರಂಥವನ್ನು ಚಿಕ್ಕೋಡಿಯ ಸಂಪಾದನಾ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಬಸವಣ್ಣನವರ ಷಟಸ್ಥಲ ವಚನಗಳು ಗ್ರಂಥವನ್ನು ರಮೇಶ ಬಿಜಲಾನಿ ಲೋಕಾರ್ಪಣೆಗೊಳಿಸಿದರು. ಸಮಾರಂಭದ ಸಾನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮಿಜಿ ವಹಿಸಿದ್ದರು.
ಶ್ರೀ ದೊರೆಸ್ವಾಮಿಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳ ಸಮ್ಮುಖದಲ್ಲಿ ಮಂಟೂರು ಸಿದ್ಧಾರೂಢ ಆಶ್ರಮದ ಶ್ರೀ ಸದಾನಂದ ಸ್ವಾಮಿಜಿ ನೇತೃತ್ವದಲ್ಲಿ ಸಿದ್ಧಸಂಸ್ಥಾನಮಠ, ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮತ್ತು ಚರಮೂರ್ತಿ ಸಂಪಾದನಾ ಮಠ, ಚಿಕ್ಕೋಡಿಯ ಶ್ರೀ ಸಂಪಾದನಾ ಮಹಾಸ್ವಾಮಿಗಳಿಗೆ ಗೌರವ ಸಮ್ಮಾನ ನಡೆಯಿತು. ಡಾ:ತೋಂಟದ ಸಿದ್ಧರಾಮ ಸ್ವಾಮಿಜಿ ಅವರ ಉಪಸ್ಥಿತಿಯಲ್ಲಿ ಸಮ್ಮಾನ ನಡೆಯಿತು.
ಬಿ. ಆಯ್. ಕೋಣೆ, ಈರನಟ್ಟಿ, ಬಿ. ಎಸ್. ಪೂಜಾರ, ಆರ್. ಬಿ. ಪಾಟೀಲ, ಎಸ್. ಎಸ್. ಅನಿಗೋಳ, ಇವರುಗಳನ್ನು ಪ್ರಸಾದಶ್ರೀ ಗೌರವ ನೀಡಿ ಸಮ್ಮಾನಿಸಲಾಯಿತು.
ಶ್ರೀ ದೇವಪ್ಪಜ್ಜನವರು, ಕೆ.ವ್ಹಿ. ನಾಗರಾಜಮೂರ್ತಿ, ಪ್ರಕಾಶ ದೇಶಪಾಂಡೆ, ಮಂಜುಳಾ ಹುಲ್ಲ, ಇವರುಗಳಿಗೆ ಕನ್ನಡ ನುಡಿಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಏಷ್ಯನ್ ಕ್ರೀಡಾ ಕೂಟದ ಪ್ರಶಸ್ತಿ ವಿಜೇತೆ(ಕುರಾಷ) ಮಲಪ್ರಭಾ ಜಾಧವ ಅವರನ್ನು ಮತ್ತು ಘೋಡಗೇರಿಯ ಸರಿಗಮಪ ಸ್ಪರ್ಧಿ ಲಕ್ಷ್ಮೀ ತಳವಾರ ಅವರನ್ನು ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಹಸನ್ ನಯೀಮ ಸುರಕೋಡ, ಶಿವಾನಂದ ಕೌಜಲಗಿ, ಸಿ.ಕೆ.ಜೋರಾಪೂರ ಅವರನ್ನು ಸತ್ಕರಿಸಲಾಯಿತು.
ತೋಂಟದ ಸಿದ್ಧರಾಮ ಸ್ವಾಮಿಜಿ ಆಶಿರ್ವಚನ ನೀಡಿದರು. ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಎಂ. ಆರ್. ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಆತ್ಮಸ್ವಾಸ್ಥ್ಯಶ್ರೀ ಪ್ರಶಸ್ತಿ ಸ್ಥಾಪಿಸಿರುವ ಡಾ:ಎಚ್.ಬಿ.ರಾಜಶೇಖರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಹಾಂತದೇವರು ಮತ್ತು ಸಿ.ಜೆ ಹಿರೇಮಠ ಅವರು ನಿರ್ವಹಿಸಿದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸೇವಕಿ ಸರಳಾ ಹೇರೆಕರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಸವ ಬಡಾವಣೆಯ ಅಕ್ಕನ ಬಳಗದ ಸದಸ್ಯರಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಭುದೇವ ಪ್ರತಿಷ್ಠಾನದ ಮಾತೃಮಂಡಳಿ ಸದಸ್ಯರು ಹಚ್ಚೇವು ಕನ್ನಡದ ದೀಪ ಹಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button