*ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಕೃತಕ ಬುದ್ಧಿಮತ್ತೆ ಬಳಕೆ*

ಬೆಳಗಾವಿಯ ಸಂಸ್ಥೆಯಿಂದ ನೂತನ ತಂತ್ರಜ್ಞಾನ ಅಭಿವೃದ್ಧಿ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆದ ಕೈಬರಹದ ಉತ್ತರಗಳು, ಗಣಿತದ ಸೂತ್ರಗಳು ಹಾಗೂ ಚಿತ್ರಗಳನ್ನು ಗುರುತಿಸಿ ಮೌಲ್ಯಮಾಪನ ಮಾಡಲು ನೆರವಾಗುವ ಕೃತಕ ಬುದ್ಧಿಮತ್ತೆ (AI) ಆಧಾರಿತ ನೂತನ ತಂತ್ರಜ್ಞಾನವನ್ನು ಬೆಳಗಾವಿ ಮೂಲದ ದೇಶಿ ಎಲ್ ಎಲ್ ಎಂ ಸಂಸ್ಥೆ ಅಭಿವೃದ್ಧಿಪಡಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಟೆಕ್ ಸಮಿಟ್ನಲ್ಲಿ ಸಂಸ್ಥೆಯ ‘ಎಕ್ಸಾಮ್ ಏಐ ಗುರು’ ಹೆಸರಿನ ಈ ತಂತ್ರಜ್ಞಾನವನ್ನು ಪ್ರದರ್ಶಿಸಲಾಯಿತು. ಈ ವ್ಯವಸ್ಥೆಯು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವಿಶ್ಲೇಷಿಸಿ, ವಿಶ್ವವಿದ್ಯಾಲಯದ ಅಧಿಕೃತ ಉತ್ತರಗಳು ಮತ್ತು ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಪ್ರಶ್ನಾವಾರು ಅಂಕಗಳನ್ನು ನೀಡುತ್ತದೆ. ಅಂತಿಮ ಅಂಕಗಳನ್ನು ವಿಶ್ವವಿದ್ಯಾಲಯದ ಮೌಲ್ಯಮಾಪಕರೇ ಪರಿಶೀಲಿಸಿ ಅನುಮೋದಿಸುತ್ತಾರೆ.
ಟೆಸ್ಲಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಕವಲ್ ಅರೋರಾ ಹಾಗೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಡಾ. ಸವಿತಾ ಬಸ್ತವಾಡಿ ಅವರು ಈ ಸಂಸ್ಥೆಯ ಸಹ-ಸ್ಥಾಪಕರಾಗಿದ್ದಾರೆ.
ಸಂಸ್ಥೆಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದೊಂದಿಗೆ ಏಐ ಆಧಾರಿತ ಪರೀಕ್ಷಾ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದೆ. ಈ ತಂತ್ರಜ್ಞಾನದಿಂದ ಪರೀಕ್ಷಾ ಮೌಲ್ಯಮಾಪನದಲ್ಲಿ ಪಾರದರ್ಶಕತೆ, ನಿಖರತೆ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯಯುತ ಅಂಕ ನೀಡುವ ವ್ಯವಸ್ಥೆಗೆ ನೆರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಕರ್ನಾಟಕ ಸರ್ಕಾರದ ಕರ್ನಾಟಕ ಅಕ್ಸಲರೇಷನ್ ನೆಟ್ವರ್ಕ್ (KAN) ಕಾರ್ಯಕ್ರಮಕ್ಕೂ ಸಂಸ್ಥೆ ಆಯ್ಕೆಯಾಗಿದೆ.



