Latest

ಕಿತ್ತೂರು ಗ್ರಾಮದೇವತೆ ಜಾತ್ರೆ 2020ರಲ್ಲಿ ಜರುಗಲಿದೆ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:

ಪಟ್ಟಣದ ಕೋಟೆ ಆವರಣದೊಳಗಿರುವ ಗ್ರಾಮದೇವತೆಯ ಜಾತ್ರೆಯನ್ನು 2020ರಲ್ಲಿ ಅದ್ಧೂರಿಯಿಂದ ನೆರವೇರಿಸಲು ಭಾನುವಾರ ರಾತ್ರಿ ಗೋಕಾಕ ತಾಲ್ಲೂಕಿನ ತುಕ್ಕಾನಟ್ಟಿಯ ಶಾಂತಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸದ್ಭಕ್ತರ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ.

Home add -Advt

2020ರಲ್ಲಿ ಯುಗಾದಿ-ಬಸವ ಜಯಂತಿ ಆಚರಣೆ ಮಧ್ಯೆ ಗ್ರಾಮದೇವಿ ಜಾತ್ರೆ ನಡೆಸಲು ಸೂಕ್ತ ಸಮಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು. 11ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕಿತ್ತೂರು ಸೇರಿದಂತೆ ಮಲ್ಲಾಪುರ, ಬಸಾಪುರ, ನಿಚ್ಚಣಕಿ, ತಿಮ್ಮಾಪುರ, ಗಿರಿಯಾಲ, ಚನ್ನಾಪುರದ ಏಳು ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವರು ಎಂದರು.

ಸುಮಾರು ರೂ. 1.5 ಕೋಟಿಗೂ ಹೆಚ್ಚು ವೆಚ್ಚ ಬರಲಿದ್ದು, ಮಹೋತ್ಸವಕ್ಕಾಗಿ ನೂತನ ರಥ ಸಿದ್ಧಗೊಳ್ಳಲಿದೆ. ರೂ. 158ಲಕ್ಷಕ್ಕೂ ಹೆಚ್ಚಿನ ದೇಣಿಗೆಯ ವಾಗ್ದಾನವನ್ನೂ ಪ್ರಮುಖರು, ಸಂಘ, ಸಂಸ್ಥೆ ಪದಾಧಿಕಾರಿಗಳು ಸ್ಥಳದಲ್ಲಿಯೇ ಘೋಷಿಸಿದರು.

ಗ್ರಾಮ ದೇವತೆ ಜಾತ್ರೆ ವಿಜೃಂಭಣೆಯಿಂದ ನೆರವೇರಿಸಲು ಇದೇ ಯುಗಾದಿ ಹಬ್ಬದ ದಿನ ಕಂಕಣ ಕಟ್ಟಿಕೊಳ್ಳುವ ಕಾರ್ಯಕ್ರಮವಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಸದಸ್ಯ ಗುರುಸಿದ್ಧಯ್ಯ ಕಲ್ಮಠ ಮನವಿ ಮಾಡಿದ್ದಾರೆ.

ಗ್ರಾಮದೇವಿ ಸಮಿತಿಯ ಅಧ್ಯಕ್ಷ ಈರಣ್ಣ ಮಾರಿಹಾಳ, ಡಾ. ಬಸವೇಶ್ವರ ತೋರಗಲಮಠ, ಗುರುಸಿದ್ಧಯ್ಯ ಕಲ್ಮಠ, ಶ್ರೀಶೈಲ ತೇಗೂರ, ಸಕ್ಕರಗೌಡ್ರ ಪಾಟೀಲ, ಅಜ್ಜಪ್ಪ ಪತ್ತಾರ, ಯಲ್ಲಪ್ಪ ವಕ್ಕುಂದ, ಗ್ರಾಮದೇವಿ ಭಜನಾ ಮಂಡಳಿ ಸದಸ್ಯರು, ಭಕ್ತರು, ಯುವಕರು ಹಾಜರಿದ್ದರು.

Related Articles

Back to top button