ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಒಂದು ದೇಶ ತನ್ನ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ಶಿಕ್ಷಣವು ಜ್ಞಾನದ ಆಧಾರದ ಮೇಲೆ ನಡೆಯಬೇಕು ಮತ್ತು ಇಂದಿನ ಜ್ಞಾನದ ಆರ್ಥಿಕತೆಯ ಕಾಲಘಟ್ಟದಲ್ಲಿ ಜ್ಞಾನ ಎನ್ನುವುದು ಉತ್ತಮ ಶಿಕ್ಷಣದಿಂದ ಬರುತ್ತದೆ ಎಂದು ಬೆಳಗಾವಿಯ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಮೋಕ್ಷಾತ್ಮಾನಂದ ಜಿ ಸ್ವಾಮೀಜಿ ಹೇಳಿದರು.
ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಾರತದ ಪರಂಪರೆ, ಸಂಸ್ಕೃತಿ ಮತ್ತು ಇಲ್ಲಿಯ ವ್ಯಕ್ತಿಗಳ ಪರಿಚಯ ಎಲ್ಲರಿಗೂ ಮುಟ್ಟಬೇಕು. ಮಾನವ ಸಂಪನ್ಮೂಲ ಬಹಳ ಅಮೂಲ್ಯವಾದ ಸಂಪನ್ಮೂಲ ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಅದು ಅಲ್ಲಿಯ ಉದ್ಯೋಗಿಗಳ ಮೇಲೆ ಅವಲಂಬಿತ ವಾಗಿರುತ್ತದೆ ಎಂದರು.
ಸಾವು ಇರುವುದು ದೇಹಕ್ಕೆ ಮಾತ್ರ, ಆತ್ಮಕ್ಕಲ್ಲ. ಆದ್ದರಿಂದ ಧ್ಯಾನದ ಅವಶ್ಯಕತೆ ಇಂದಿನ ಯುಗಕ್ಕಿದೆ ಮತ್ತು ಆಧ್ಯಾತ್ಮಿಕ ಧ್ಯಾನದಿಂದ ಮಾನವ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು. ಸ್ವ ಪ್ರಯತ್ನ ಮತ್ತು ನಂಬಿಕೆಗಳಿಂದ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧಿಸಬೇಕೆಂದು ಕಿವಿಮಾತು ಹೇಳಿದರು.
ಇದೆ ಸಂದರ್ಭದಲ್ಲಿ ೨೦೧೮ ರ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶಿವಾನಂದ ಕೌಜಲಗಿ ಹಾಗೂ ಬೆಳಗಾವಿಯ ಪ್ರಸಿದ್ಧ ಉದ್ಯಮಿ ಬಾಳಾಸಾಹೇಬ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ವಿನೋದ ದೊಡ್ಡಣ್ಣವರ ಅವರು ಮಾತನಾಡಿ ಭರತೇಶ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿ ಮತ್ತು ಸಾಧನೆಗಳನ್ನು ವಿವರಿಸಿದರು. ರಾಜೀವ ದೊಡ್ಡಣ್ಣವರ ಅವರು ಮಾತನಾಡಿ ೨೦೧೯ ರಲ್ಲಿ ನಡೆಯುವ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿದರು.
ಕುಬೇರ್ ಹಂಜಿ, ಎಸ್. ಜಿ. ಹಂಜಿ, ಸುರೇಶ ಕುಲಕರ್ಣಿ, ಕುಂತಿನಾಥ ಕಲ್ಮನಿ ಮತ್ತು ಸೂರಜ್ ಗಾವಳಿ ಅವರನ್ನು ಸಹ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಸಂಸ್ಥೆಯಲ್ಲಿ ೨೫ ವರ್ಷಗಳಿಂದ ಸೇವೆ ಸಲ್ಲಿಸಿದ ಮತ್ತು ಈ ವರ್ಷದ ಉತ್ತಮ ಉದ್ಯೋಗಿಗಳಿಗೆ ಪ್ರಶಸ್ತಿ ಮತ್ತು ನಗದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪುಷ್ಪದಂತ ದೊಡ್ಡಣ್ಣವರ, ಉಪಾಧ್ಯಕ್ಷ ಡಾ. ಜಿನದತ್ತ ದೇಸಾಯಿ, ಖಜಾಂಚಿಗಳಾದ ಶ್ರೀಪಾಲ ಖೇಮಲಾಪುರೆ ಉಪಸ್ಥಿತರಿದ್ದರು.
ಡಾ. ಜ್ಯೋತಿ ಕಾಮತ್ ಮತ್ತು ಡಾ. ಅಮೆಯ್ ಜಾಥಾರ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಸಾದ ದಡ್ಡಿಕರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ