ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ, ಬೆಳಗಾವಿ
ಬೆಂಗಳೂರು ನಗರದ ಬಿ. ಎಂ. ಕಾವಲ್‌ನ ಸರ್ಕಾರಿ ಭೂಮಿ ಪರಭಾರೆ ವಿಷಯವನ್ನು ಪ್ರತ್ಯೇಕವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ರಾಜ್ಯ ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಗುರುವಾರ ಭರವಸೆ ನೀಡಿದರು.
ಶೂನ್ಯ ವೇಳೆಯಲ್ಲಿ ಶಾಸಕ ಎ. ಟಿ. ರಾಮಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ ಬೆಂಗಳೂರಿನ ಬಿ.ಎಂ. ಕಾವಲು ಪ್ರದೇಶದ ೩೧೦.೧೮ ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಪ್ರಯತ್ನ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಸದನದ ಗಮನ ಸೆಳೆದು ಈ ಹಿಂದೆ ೨೦೦೬ ರಲ್ಲಿ ಸಾಕಷ್ಟು ವಿರೋಧಗಳ ನಡುವೆ ಜಂಟಿ ಸದನ ಸಮಿತಿಯು ಸರ್ಕಾರಿ ಭೂಮಿಯನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿತ್ತು. ಬಿ.ಎಂ. ಕಾವಲ್‌ನ ಈ ಸರ್ಕಾರಿ ಭೂಮಿಯ ಮೂರು ಸಾವಿರ ಕೋಟಿ ರೂ ಗಳಿಗೂ ಹೆಚ್ಚು ಮೌಲ್ಯದ್ದಾಗಿದೆ. ಇದೀಗ ಈ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಪ್ರಯತ್ನ ಮಾಡಿರುವುದು ಸರಿಯಲ್ಲ. ಇದು ಗಂಭೀರ ವಿಚಾರವಾಗಿದೆ. ಆದಕಾರಣ, ಈ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲು ಅವಕಾಶ ಕಲ್ಪಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ವಿಷಯದ ಗಂಭೀರತೆಯನ್ನು ಮನಗಂಡ ಸಭಾಧ್ಯಕ್ಷರು ಈ ಬಗ್ಗೆ ವ್ಯಾಪಕ ಚರ್ಚೆಯ ಅಗತ್ಯವಿದೆ. ಮುಂದಿನ ವಾರ ಈ ವಿಷಯದ ಕುರಿತು ಪ್ರತ್ಯೇಕವಾಗಿ ಚರ್ಚಿಸಲು ಸಲಹೆ ನೀಡಿದರು. ಸರ್ಕಾರ ಮತ್ತು ಸದನದ ಎಲ್ಲಾ ಸದಸ್ಯರು ಪ್ರತ್ಯೇಕ ಚರ್ಚೆಗೆ ಸಮ್ಮತಿಸಿದ ಹಿನ್ನೆಲೆಯಲ್ಲಿ ವಿಷಯವನ್ನು ವಿಸ್ತೃತವಾಗಿ ಚರ್ಚಿಸಲು ಸಭಾಧ್ಯಕ್ಷರು ಅವಕಾಶ ಕಲ್ಪಿಸಲು ಭರವಸೆಯಿತ್ತರು.
ತುಮಕೂರು ಜಿಲ್ಲೆಗೆ ಹೇಮಾವತಿ ನೀರು :
ತುಮಕೂರು ಜಿಲ್ಲೆಯಲ್ಲಿನ ಹೇಮಾವತಿ ನಾಲೆಗೆ ಶೀಘ್ರವೇ ನೀರು ಹರಿಸುವತ್ತ ಕ್ರಮ ವಹಿಸುವುದಾಗಿ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ. ಕೆ. ಶಿವಕುಮಾರ್ ಅವರು ಗುರುವಾರ ಪ್ರಕಟಿಸಿದರು.
ಹೇಮಾವತಿ ನಾಲೆಗೆ ೨೪ ಟಿ ಎಂ ಸಿ ನೀರು ಹರಿಸಬೇಕಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಗೆ ನೀರು ಹರಿಸಲಾಗಿತ್ತು. ಆದರೆ, ನಿಗದಿಯಾಗಿರುವ ನೀರು ಈ ಪ್ರದೇಶಕ್ಕೆ ಹರಿಸಿರುವುದಿಲ್ಲ. ಈ ನಡುವೆ ಏಕಾಏಕಿ ನಾಲೆಯಲ್ಲಿ ನೀರು ನಿಲ್ಲಿಸಿರುವುದರಿಂದ ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರವಾಗಿದೆ. ಕನಿಷ್ಠ ಕರೆ-ಕಟ್ಟೆಗಳನ್ನು ತುಂಬಿಸಿದರೆ ರೈತರಿಗೆ, ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಶಾಸಕ ಜೆ. ಸಿ. ಮಾಧುಸ್ವಾಮಿ ಅವರು ಪ್ರಸ್ತಾಪಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ತುಮಕೂರು ಜಿಲ್ಲೆಯ ಹೇಮಾವತಿ ನಾಲೆಗೆ ನೀರು ಹರಿಸುವ ಸಂಬಂಧ ಆ ಭಾಗದ ಸ್ಥಳೀಯ ಮುಖಂಡರೊಂದಿಗೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿಯೇ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಮುನ್ನ, ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ತುಮಕೂರು ಭಾಗದ ಶಾಸಕರು ಮಾಧುಸ್ವಾಮಿ ಅವರ ಈ ಪ್ರಸ್ತಾಪಕ್ಕೆ ದನಿಗೂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ