ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬೆಂಗಳೂರಿನ ಖಾಸಗಿ ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕೊಠಡಿಯಲ್ಲಿ ಕೂಡಿಟ್ಟಿದ್ದ 2 ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆನಂದ್ ರಾವ್ ವೃತ್ತದ ಬಳಿ ಇರುವ ರಾಜಮಹಲ್ ಹೋಟೆಲ್ ಮೇಲೆ ಶುಕ್ರವಾರ ಅಧಿಕಾರಿಗಳು ದಾಳಿ ನಡೆಸಿದರು. ಕೊಠಡಿ ಸಂಖ್ಯೆ 104, 105 ಮತ್ತು 115ರಲ್ಲಿ ಹಣ ಸಂಗ್ರಹಣೆ ಮಾಡಿರುವ ಖಚಿತ ಮಾಹಿತಿ ಅನ್ವಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಹಾವೇರಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ನಾರಾಯಣಗೌಡ ಬಿ.ಪಾಟೀಲ್ ಅವರು ಹೋಟೆಲ್‌ನಲ್ಲಿ ಮೂರು ರೂಂ ಬುಕ್ ಮಾಡಿದ್ದರು. ಹಾವೇರಿಯಿಂದ ಅವರು ಬೆಂಗಳೂರಿಗೆ ಹಣವನ್ನು ಸಾಗಾಣೆ ಮಾಡಿದ್ದಾರೆ ಎಂಬ ಮಾಹಿತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿತ್ತು. ಈ ಮಾಹಿತಿ ಅನ್ವಯ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ 500 ರೂ. ಮತ್ತು 2 ಸಾವಿರ ರೂ. ನೋಟುಗಳ 2 ಕೋಟಿ ಹಣವನ್ನು ಸಂಗ್ರಹ ಮಾಡಿರುವುದು ಬೆಳಕಿಗೆ ಬಂದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಣೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಐಟಿ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ನಾರಾಯಣಗೌಡ ಬಿ.ಪಾಟೀಲ್ ಪರಾರಿಯಾಗಿದ್ದಾರೆ. ಹಾವೇರಿಯಲ್ಲಿ ಅವರು ಮೂರು ಮನೆಯನ್ನು ಕಟ್ಟಿಸಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಸೇರ್ ಮಾಡಿ)