ದತ್ತಾತ್ರಯ ಹೊಸಬಾಳೆ, ಜಯಂತ ಸಿನ್ಹಾ, ರಾಮ ಮಾಧವ, ಜೆ.ನಂದಕುಮಾರ ಸೇರಿ ಹಲವು ಗಣ್ಯರ ಉಪಸ್ಥಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ: ಪ್ರಬುದ್ಧ ಭಾರತ ಸಂಘಟನೆ ಅಡಿಯಲ್ಲಿ 2 ದಿನಗಳ ಸಮಾವೇಶ ‘ಸ್ಟೆಪ್ -2018’ ಡಿಸೆಂಬರ್ 1 ಮತ್ತು 2ರಂದು ಬೆಳಗಾವಿಯಲ್ಲಿ ನಡೆಯಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರಯ ಹೊಸಬಾಳೆ, ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ, ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ.ನಂದಕುಮಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪ್ರಬುದ್ಧ ಭಾರತದ ಸಂಚಾಲಕ ಚೈತನ್ಯ ಕುಲಕರ್ಣಿ ಮತ್ತು ಸಹ ಸಂಚಾಲಕ ಸಚಿನ್ ಸಬ್ನಿಸ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ ಸಮಾವೇಶಕ್ಕೆ ಕೆಎಲ್ಇ ವಿವಿ, ವಿಟಿಯು ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಯೋಗ ಒದಗಿಸಲಿವೆ.
ಡಿ.1ರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರಯ ಹೊಸಬಾಳೆಯವರ ದಿಕ್ಸೂಚಿ ಭಾಷಣದೊಂದಿಗೆ ಸಮಾವೇಶ ಆರಂಭವಾಗಲಿದೆ. ಮಾನವ ಹಕ್ಕುಗಳ ಸಂಘಟನೆಯ ಸಂಸ್ಥಾಪಕಿ ಡಾ.ಮಧುಕಿಶ್ವರ, ನಾಗರಿಕ ಹಕ್ಕುಗಳ ಕಾರ್ಯಕರ್ತ ಶೆಹಜಾದ ಪೂನಾವಾಲಾ, ಇಸ್ರೋ ಮಾಜಿ ಮುಖ್ಯಸ್ಥ ಕಿರಣ ಕುಮಾರ, ಲೇಖಕ ಪ್ರೊ.ಪಿ.ಕನಗಸಭಾಪತಿ, ಮಣಿಪುರದ ರಾಜಕೀಯ ವಿಚಾರವಾದಿ ರಜತ್ ಸೇಥಿ, ಪುನರುತ್ಥಾನ ವಿದ್ಯಾಪೀಠದ ಸಂಸ್ಥಾಪಕಿ ಇಂದುಮತಿ ಕಾಟದಾರೆ, ಭಾರತೀಯ ಶಿಕ್ಷಣ ಮಂಡಳದ ಕಾರ್ಯದರ್ಶಿ ಮುಖುಲ್ ಕಾನಿಟ್ಕರ್, ಡಾ.ಶಾಮಪ್ರಸಾದ ಮಖರ್ಜಿ ಫೌಂಡೇಶನ್ ನಿರ್ದೇಶಕ ಡಾ.ಅನಿರ್ಬಾನ್ ಗಂಗೂಲಿ, ಲೇಖಕ ಕಿರಣಕುಮಾರ, ಹಿರಿಯ ಪತ್ರಕರ್ತ ಕೆ.ಎಸ್. ಪ್ರಫುಲ್ ಕೇತ್ಕರ್, ಲೇಖಕಿ ಶುಭರಸ್ತಾ ಮೊದಲಾದವರು 2 ದಿನದ ಸಮಾವೇಶದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.
2ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಮುಕ್ತ ಸಂವಾದದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ ಮತ್ತು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಪಾಲ್ಗೊಳ್ಳುವರು. 3.45ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ.ನಂದಕುಮಾರ ಭಾಗವಹಿಸಲಿದ್ದಾರೆ.
ಸಮಾವೇಶಕ್ಕೆ ನೊಂದಣಿ ಪ್ರಕ್ರಿಯೆ ಭರದಿಂದ ನಡೆಯುತ್ತಿದ್ದು, ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 800ಕ್ಕೂಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿನಿಧಿಗಳಾಗಿ ನೊಂದಾಯಿಸಿದವರಿಗೆ ಮಾತ್ರ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದ್ದು, ಈ ತಿಂಗಳ 30ರ ವರೆಗೂ ನೊಂದಣಿ ಮಾಡಿಸಬಹುದು ಎಂದು ತಿಳಿಸಿದರು.
ರಾಷ್ಟ್ರೀಯ ವಿಚಾರಧಾರೆಯ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮೋತ್ಸವದ ಸಂದರ್ಭವಾದ 2012-13ರಲ್ಲಿ ಬೆಳಗಾವಿಯಲ್ಲಿ ಆರಂಭವಾದ ಪ್ರಬುದ್ಧ ಭಾರತ ಅಭಿಯಾನ ಈವರೆಗೆ 15ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ದತ್ತಾತ್ರಯ ಹೊಸಬಾಳೆ, ಡಾ.ಸುಬ್ರಹ್ಮಣ್ಯಸ್ವಾಮಿ ಪ್ರೊ.ವೈದ್ಯನಾಥನ್ ಸೇರಿದಂತೆ ಹಲವಾರು ರಾಷ್ಟ್ರೀಯ ನಾಯಕರು ಉಪನ್ಯಾಸ ನೀಡಿದ್ದಾರೆ. ಭಾರತದ ಘನತೆಯ ಹಕ್ಕನ್ನು ಪುನರ್ ಸ್ಥಾಪಿಸುವುದು ಪ್ರಬುದ್ಧ ಭಾರತದ ಈ ವರ್ಷದ ಘೋಷ ವಾಖ್ಯವಾಗಿದೆ.
ಬರುವ ದಿನಗಳಲ್ಲಿ ಪ್ರಬುದ್ಧ ಭಾರತದ ಕಾರ್ಯಚಟುವಟಿಕೆಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ನೆರೆ ರಾಜ್ಯಗಳಿಗೂ ವಿಸ್ತರಿಸಲು ಉದ್ಧೇಶಿಸಲಾಗಿದೆ ಎಂದು ಅವರು ಹೇಳಿದರು.
ಪ್ರತಿನಿಧಿಗಳಾಗಲು ಆಸಕ್ತರು www.prabuddhabharat.org ನಲ್ಲಿ ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ 9480188877 ಅಥವಾ 9886635260 ಸಂಪರ್ಕಿಸಬಹುದು ಎಂದರು.
ಆನಂದ ಬಕ್ಕೆಬಾಗಿ, ಸತೀಶ ಕುಲಕರ್ಣಿ ಸೇರಿದಂತೆ ಪ್ರಬುದ್ಧ ಭಾರತದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ