ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಧರ್ಮದ ಕುರಿತು ದೂರದೃಷ್ಟಿ ಇಲ್ಲದವರು ಧರ್ಮವನ್ನು ಒಡೆಯುತಿದ್ದೇವೆ ಎಂದು ಹೇಳುತ್ತಿದ್ದಾರೆ. ಜಾತಿಯ ವ್ಯವಸ್ಥೆಯನ್ನ ಉಳಿಸುವ ಸಲುವಾಗಿ ಸಂಪ್ರದಾಯಿಗಳು ಧರ್ಮವನ್ನು ಒಡೆಯುತ್ತಿದ್ದಾರೆ ಎಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಸವಣ್ಣನವರ ತತ್ವಗಳ ಅಸ್ಮಿತೆಗಾಗಿ ಲಿಂಗಾಯಿತ ಸ್ವತಂತ್ರ ಧರ್ಮದ ಹೋರಾಟ ಮುಂದುವರಿಯುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದು ತೋಂಟದಾರ್ಯಮಠ ಮತ್ತು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಜಾಗತಿಕ ಲಿಂಗಾಯತ ಮಹಸಭೆ ಬೆಳಗಾವಿ ಜಿಲ್ಲಾ ಘಟಕ, ರಾಷ್ಟ್ರೀಯ ಬಸವಸೇನೆ ಬೆಳಗಾವಿ ಜಿಲ್ಲಾಘಟಕ ವಿವಿಧ ಮಹಿಳಾ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಾಗೂ ಸೋಮವಾರದಂದು ವಿಶ್ವಗುರು ಬಸವ ಜಯಂತಿ ಉತ್ಸವ -೨೦೧೯’ ವಿವಿಧ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಉದ್ಘಾಟನಾ ಕಾರ‍್ಯಕ್ರಮದ ಸಾನಿಧ್ಯವಹಿಸಿದ್ದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಯಾರು ಎಷ್ಟೇ ವಿರೋಧ ಮಾಡಿದರೂ ಸಾಂವಿಧಾನಿಕ ಮಾನ್ಯತೆ ಸಿಕ್ಕೇ ಸಿಗುತ್ತದೆ. ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬೈಲೂರ ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಟದಾರ್ಯ ಮಹಾಸ್ವಾಮಿಗಳು ತತ್ವ ಸಿದ್ಧಾಂತಗಳ ಮೊದಲ ಪಾಠ ಮನೆಯಲ್ಲಿಯೇ ತಾಯಿಯ ಬಾಯಿಯಿಂದ ಪ್ರಾರಂಭವಾಗಬೇಕು. ತಾಯಂದಿರು ವಚನ ಸಾಹಿತ್ಯದ ತಿರುಳನ್ನು ಮಕ್ಕಳಿಗೆ ತಿಳಿಹೇಳಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಣಿ ಪಾರ್ವತಿದೇವಿ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಕೋಲಕಾರ ಅವರು, ಬಸವಣ್ಣನವರು ಸಾಮರಸ್ಯಕ್ಕಾಗಿ ಸಾವನ್ನೇ ಎದುರು ಹಾಕಿಕೊಂಡವರು. ಶೋಷಿತರನ್ನು, ದಲಿತರನ್ನು ಮೇಲಕ್ಕೆತ್ತಲು ತಮ್ಮ ಬದುಕನ್ನೇ ಹೋರಾಟಕ್ಕೆ ಒಡ್ಡಿಕೊಂಡವರು. ಬುದ್ದನ ನಂತರ ಇಡೀ ಸಮಾಜವನ್ನೇ ತಮ್ಮ ಮಹಾಮನೆಯನ್ನಾಗಿಸಿಕೊಂಡ ಜಗತ್ತಿನ ಏಕೈಕ ಸಾಮರಸ್ಯದ ಮಹಾನುಭಾವರು ಎಂದು ಹೇಳಿದರು.
ಶಂಕರ ಗುಡಸ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಷಟ್‌ಸ್ಥಳ ಧ್ವಜಾರೋಹಣವನ್ನು ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಅರವಿಂದ ಪರುಶೆಟ್ಟಿ ವಹಿಸಿದ್ದರು. ಅಶೋಕ ಮಳಗಲಿ ನಿರೂಪಿಸಿದರು. ಅಡಿವೆಪ್ಪ ಬೆಂಡಿಗೇರಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ