ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು
ಜನಸಾಮಾನ್ಯರಿಗೆ ಅವಶ್ಯವಿರುವ ಯೋಜನೆಗಳನ್ನು ಬಿಟ್ಟು ಜೀವಹೋದ ಮನುಷ್ಯನಿಗೆ ಆಮ್ಲಜನಕ ನೀಡುವ ಕಾರ್ಯ ಇಂದಿನ ರಾಜಕಾರಣದಲ್ಲಿ ನಡೆಯುತ್ತಿದೆ ಎಂದು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರಪ್ರೈಸಿಸ್ಸಿನ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಕಳವಳ ವ್ಯಕ್ತಪಡಿಸಿದರು.
ಕಿತ್ತೂರು ರಾಣಿ ಚನ್ನಮ್ಮಾ ಬಾಲಕಿಯರ ವಸತಿ ಸೈನಿಕ ಶಾಲೆಯ 50 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗೀನ ರಾಜಕಾರಣಿಗಳಿಗೆ ದೂರದೃಷ್ಟಿಯಿಲ್ಲದ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದ ಅವರು ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯರು ವರದಕ್ಷಣೆ ನೀಡಿ ಮದುವೆ ಆಗುವುದಕ್ಕಿಂತ ವರದಕ್ಷಿಣೆ ಪಡೆದುಕೊಂಡು ಮದುವೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ವಿದ್ಯೆಯ ಜೊತೆಗೆ ಶಿಸ್ತು ಹಾಗೂ ದೇಶಪ್ರೇಮವನ್ನು ಇಮ್ಮಡಿಗೊಳಿಸುವ ಕಾರ್ಯವನ್ನು ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮಾ ಬಾಲಕಿಯರ ವಸತಿ ಸೈನಿಕ ಶಾಲೆಯು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮವು ಇದ್ದು ಅದನ್ನು ಬಡೆದೆಬ್ಬಿಸುವ ಕಾರ್ಯವನ್ನು ಇಂತಹ ಶಾಲೆಗಳು ಮಾಡುತ್ತವೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಶಾಲೆಗಳು ಅನಾವರಣಗೊಂಡಲ್ಲಿ ಬಾಲಕಿಯರಿಗೆ ದೇಶಪ್ರೇಮದ ಜೊತೆ ಆತ್ಮರಕ್ಷಣೆಯ ಪಾಠವನ್ನು ಕಲಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಈ ಶಾಲೆಯಲ್ಲಿ ಕಲಿತ ಅದೆಷ್ಟೋ ಮಕ್ಕಳು ಉನ್ನತ ಹುದ್ದೆಗಳನ್ನು ಹೊಂದಿ ಅತ್ಯುತ್ತಮ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಈ ಶಾಲೆಯ ರಾಣಿ ಚನ್ನಮ್ಮಾ ಎನ್ನುವ ಹೆಸರು. ಶಾಲಾ ಆಡಳಿತ ಮಂಡಳಿಯ ಉತ್ತಮ ಆಡಳಿತ. ರಾಣಿ ಚನ್ನಮ್ಮಾಜಿಯ ಖ್ಯಾತಿಯಂತೆ ಈ ಶಾಲೆಯೂ ದೇಶದಲ್ಲಿ ಪ್ರಖ್ಯಾತಿ ಹೊಂದಿದೆ ಎಂದರು.
ವಿದ್ಯಾರ್ಥಿಗಳ ಬೆಳವಣಿಗೆಯ ಆಧಾರದ ಮೇಲೆ ದೇಶದ ಬೆಳವಣಿಗೆ ನಿಂತಿದ್ದು ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಅಲ್ಲದೆ ಜೀವನದುದ್ದಕ್ಕೂ ಹಲವಾರು ವಿಷಯಗಳಿಗೆ ಜಿಗುಪ್ಸೆ ಉಂಟಾಗುತ್ತದೆ, ಜಿಗುಪ್ಸೆಯತ್ತ ಯಾರೂ ಚಿಂತಿಸದೇ ಧೈರ್ಯವಾಗಿ ಮುನ್ನಡೆದಲ್ಲಿ ಯಶಸ್ಸು ನಿಮ್ಮ ಜೊತೆ ಬರುತ್ತದೆ ಎಂದು ಕಿವಿಮಾತನ್ನು ಹೇಳಿದ ಅವರು, ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿಗಳು ಯಾರೂ ತಪ್ಪು ಮಾಡದೆ ಯಶಸ್ಸು ಕಂಡಿಲ್ಲ. ಹೀಗಾಗಿ ಜೀವನದಲ್ಲಿ ನಡೆಯುವ ಚಿಕ್ಕ ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುನ್ನಡೆಯುವಂತೆ ಸೂಚಿಸಿದರು.
2,200 ಕೋಟಿ ರೂ. ಕೆಲಸಕಾರ್ಯಗಳು, 900 ಕಿಮೀ ರಸ್ತೆ ನಿರ್ಮಾಣ ಸೇರಿದಂತೆ ನನ್ನ ಆಡಳಿತಾವಧಿಯಲ್ಲಿ ಅನೇಕ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜೊತೆಗೆ ಎಂದಿಗೂ ಹಣ ಹಾಗೂ ಜಾತಿ ರಾಜಕಾರಣವನ್ನು ನಾನು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಉನ್ನತ ವಿಚಾರಗಳನ್ನು ಹಾಗೂ ಅಭಿವೃದ್ಧಿ ಮತ್ತು ಬದಲಾವಣೆ ಬಯಸಿ ನಾನು ಚುನಾವಣೆಗೆ ದುಮುಕ್ಕಿದ್ದೆ. ಅದರಂತೆ ಚುನಾಯಿತನಾಗಿ ಕೈಲಾದ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಸಂತಸ ನನ್ನ ಮನದಲ್ಲಿದೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿ ಅಧ್ಯಕ್ಷೆ ಡಾ.ದಾಕ್ಷಾಯಿಣಿ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆ ಚೇರಮನ್ ಮಹೇಂದ್ರ ಕಂಠಿ, ಉಪಾಧ್ಯಕ್ಷ ಮಹಾಂತಪ್ಪ ಪಟ್ಟಣಶೆಟ್ಟರ, ಕಾರ್ಯದರ್ಶಿ ಹಾಗೂ ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಸೇರಿದಂತೆ ಇತರರು ಇದ್ದರು. ಪ್ರಾಚಾರ್ಯ ನಿವೃತ್ತ ಕರ್ನಲ್ ಆರ್.ಎಸ್.ಖತ್ರಿ ಸ್ವಾಗತಿಸಿದರು. ಕೆಡೆಟ್ ಕ್ಯಾಪ್ಟನ್ ಶಿವರಂಜನಿ ಎಸ್.ಎಮ್. ವಂದಿಸಿದರು.
ಉದ್ಘಾಟನೆ ಸಮಾರಂಭಕ್ಕೂ ಮೊದಲು ಶಾಲೆಯ ವಿದ್ಯಾರ್ಥಿನಿಯಿರಿಂದ ಆಕರ್ಷಕ ಪಥಸಂಚಲನ ನಡೆಯಿತು. ನೈಸ್ ಸಂಸ್ಥೆ ಮಾಲೀಕ ಅಶೋಕ ಖೇಣಿ ಅವರು ಕೆಡೆಟ್‌ಗಳಿಂದ ಗೌರವವಂದನೆ ಸ್ವೀಕರಿಸಿದರು.
ವಿದ್ಯಾರ್ಥಿನಿಯರ ಯೋಗ, ಹಗ್ಗದಾಟ, ಕರಾಟೆ, ಬೆಂಕಿಯ ರಿಂಗ್‌ನಲ್ಲಿ ಹಾರುವುದು, ಸ್ಕೇಟಿಂಗ್, ಕುದುರೆ ಸವಾರಿ ಮೊದಲಾದ ಕಸರತ್ತುಗಳು ನೋಡುಗರ ಗಮನಸೆಳೆದವು.
ಬಾಲಕಿಯರ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಗಮನ ಸೆಳೆದವು ಭಾರತೀಯ ಸಂಸ್ಕೃತಿ ಬಿಂಬಿಸುವ ದೇಶ ಭಕ್ತಿ ಗೀತೆಗಳು ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದರೆ, ರಷ್ಯಾದ ನೃತ್ಯ, ಜರ್ಮನ ನೃತ್ಯ, ಮಹಾರಾಷ್ಟ್ರದ ಜಾನದ ಶೈಲಿಯ ನೃತ್ಯ, ಕರ್ನಾಟಕದ ಹಳ್ಳಿ ಸೊಬಗನ್ನು ಸಾರುವ ರೈತರ ನೃತ್ಯ, ಮೈಶಾಸುರ ವಧೆಯ ನೃತ್ಯ, ಪಾರ್ವತಿ ಪರಮೇಶ್ವರ ನೃತ್ಯ ನೋಡುಗರ ಮನ ಸೆಳೆದವು.
ಶಾಲಾ ಸಂಸ್ಥಾಪನೆ ಅಂಗವಾಗಿ ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿಯವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಲಾಯಿತು. ವಿವಿಧ ಕ್ರಿಡಾ ಕೂಟದಲ್ಲಿ ಮತ್ತು ವಿವಿಧ ವಿಭಾಗಗಳಲ್ಲಿ ಸಾಧನೆ ಗೈದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ