Kannada NewsKarnataka News

16 ವರ್ಷಗಳ ಬೇಡಿಕೆ ಈಡೇರಿಕೆ: ಸಾಂಬ್ರಾ ಜನರಲ್ಲಿ ಹರ್ಷವೋ ಹರ್ಷ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2004ರಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮೇಲೆ ಮನವಿ ಕೊಟ್ಟು ಸುಸ್ತಾಗಿದ್ದ ಸಾಂಬ್ರಾ ಜನರಿಗೆ ಇಂದು ಹರ್ಷವೋ ಹರ್ಷ. 16 ವರ್ಷಗಳ ಜನರ ಬೇಡಿಕೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಈಡೇರಿಸಿದ್ದಾರೆ. ತನ್ಮೂಲಕ ಜನರ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದ್ದಾರೆ.
ಇಲ್ಲಿಯ ಸರಕಾರಿ ಪ್ರಾಥಮಿಕ ಶಾಲೆ ಒಂದೂವರೆ ದಶಕದಿಂದಲೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಸ್ವಂತ ಕಟ್ಟಡ ಬೇಕೆಂದು ಜನರು ಅಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಯಾವ ಜನಪ್ರತಿನಿಧಿಯೂ ಕಿವಿಗೊಟ್ಟಿರಲಿಲ್ಲ. ಅಧಿಕಾರಿಗಳೂ ಮನಸ್ಸು ಮಾಡಿರಲಿಲ್ಲ.
ಇದೀಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜನರ ಕನಸನ್ನು ನನಸು ಮಾಡಿದ್ದಾರೆ. ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ 4 ಕೊಠಡಿಗಳನ್ನು ಮಂಜೂರು ಮಾಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿದರು. ಇದರಿಂದಾಗಿ ಗ್ರಾಮದಲ್ಲಿ ಸಂಭ್ರಮ ಉಂಟಾಗಿತ್ತು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚುನಾವಣೆ ಪೂರ್ವ ನಿಡಿದ್ದ ಎಲ್ಲ ಭರವಸೆಗಳನ್ನೂ ಹಂತಹಂತವಾಗಿ ಈಡೇರಿಸುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪ್ರವಾಹ ಮತ್ತು ಕೊರೋನಾದಂತಹ ಕ್ಲಿಷ್ಟಕರ ಸಂದರ್ಭ ಎದುರಾದರೂ ಹಿಂದೆ ಮುಂದೆ ನೋಡದೆ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಮಾದರಿ ಶಾಸಕಿ ಎನ್ನುವ ಹೆಸರನ್ನು ಅವರ ಪಡೆದಿದ್ದಾರೆ. ಜನರ ಸಹಕಾರವೇ ಇದಕ್ಕೆಲ್ಲ ಕಾರಣ ಎಂದು ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಆದರ್ಶವನ್ನಾಗಿಸುವ ಕನಸನ್ನು ಲಕ್ಷ್ಮಿ ಹೆಬ್ಬಾಳಕರ್ ಇಟ್ಟುಕೊಂಡಿದ್ದಾರೆ. ಆ ದಿಸೆಯಲ್ಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಹಾಗಾಗಿ ಜನರು ಅವರ ಬೆನ್ನಿಗೆ ನಿಂತು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ಮುಖಂಡರಾದ ನಾಗೇಶ ದೇಸಾಯಿ, ಸದುಗೌಡ ಪಾಟೀಲ, ಸ್ಥಳೀಯ ಗ್ರಾಮ ಪಂಚಾತಿಯಿ ಅಧ್ಯಕ್ಷರು, ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಗ್ರಾಮಸ್ಥರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button