
ಸಂತ್ರಸ್ತರಿಗೆ 40 ಲಕ್ಷ ರೂ. ಸಾಮಗ್ರಿಗಳ ನೆರವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಐ.ಡಿ.ಎಫ್ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ, ಐ.ಡಿ.ಎಫ್ ಎಫ್ ಎಸ್ ಪಿ ಎಲ್, ಐ.ಡಿ.ಎಫ್ ಸುಜೀವನ ಒಕ್ಕೂಟ, ಐ.ಡಿ.ಎಫ್ ರೈತ ಉತ್ಪಾದಕ ಕಂಪನಿಗಳು ಹಾಗೂ ಗೆಳೆಯರ ವೃಂದ ಬೆಳಗಾವಿ ಜಿಲ್ಲೆ ನೆರೆ ಸಂತ್ರಸ್ತರಿಗೆ ಅಂದಾಜು ರೂ. ೪೦ ಲಕ್ಷ ಸಾಮಗ್ರಿಗಳ ನೆರವು ನೀಡಿದೆ.
ಕಳೆದ ವಾರಗಳಲ್ಲಿ ಸುರಿದ ಮಳೆ ಮತ್ತು ನೆರೆ ರಾಜ್ಯದಿಂದ ಹರಿದು ಬಂದ ನೀರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಲ್ಲಣ ಮೂಡಿಸಿದೆ. ಸಾವಿರಾರು ಕುಟುಂಬಗಳು ನೆರೆ ಹಾವಳಿಯಲ್ಲಿ ಸಿಕ್ಕು ಮನೆ – ಜಾನುವಾರು, ಬೆಳೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ಹಲವಾರು ದಿನಗಳಿಂದ ಸರ್ಕಾರ ನಡೆಸುವ ಗಂಜಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ.
ಅವರ ನೆರವಿಗೆ ಹಲವಾರು ಸಂಘ-ಸಂಸ್ಥೆಗಳು ಸಹಾಯ ಹಸ್ತವನ್ನು ಚಾಚಿದ್ದಾರೆ. ಅದರಲ್ಲಿ ಐ.ಡಿ.ಎಫ್. ಸಮೂಹ ಸಂಸ್ಥೆಗಳಾದ ಮಹಿಳಾ ಒಕ್ಕೂಟ, ಕಿರುಹಣಕಾಸು ಸಂಸ್ಥೆ, ತುಮಕೂರು ಜಿಲ್ಲಾ ರೈತ ಉತ್ಪಾದನಾ ಕಂಪನಿಗಳು ಮತ್ತು ಗೆಳೆಯರ ವೃಂದ ಸಂತ್ರಸ್ಥರ ನೆರವಿಗೆ ಬಂದಿದ್ದು, ಬೆಳಗಾವಿ, ಎಂ ಕೆ ಹುಬ್ಬಳ್ಳಿ, ಯರಗಟ್ಟಿ, ರಾಮದುರ್ಗ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ ಮತ್ತು ರಾಯಬಾಗ ತಾಲೂಕಿನ, ಸಂಸ್ಥೆಯೇ ಆಯ್ಕೆ ಮಾಡಿದ ಸುಮಾರು ೨೫೦೦ ಕುಟುಂಬಗಳಿಗೆ ನೆರವನ್ನು ನೀಡಲಿದ್ದಾರೆ.
ಅಂದಾಜು ೪೦ ಲಕ್ಷ ಮೊತ್ತದ ಸಾಮಗ್ರಿಗಳನ್ನು ವಿತರಿಸಲಾಗುತ್ತಿದ್ದು. ಮನೆ ಬಿದ್ದ ೪೦೦ ಕುಟುಂಬಗಳಿಗೆ ತಾಡಪಾಲು, ೨೫೦೦ ಕುಟುಂಬಗಳಿಗೆ ಸೋಲಾಪುರ ಚಾದರಗಳು, ಪ್ರತಿ ಕುಟುಂಬಕ್ಕೆ ೧೦-೧೫ ಕೆಜಿ ಅಕ್ಕಿ(೨೫ ಕಿಂಟಾಲ್), ಮಸಾಲಾ ಪದಾರ್ಥಗಳು(೩.೩ ಕಿಂಟಾಲ್), ೧೨೫೦ ಲೀಟರ ಸೂರ್ಯಕಾಂತಿ ಎಣ್ಣೆ, ೧೦ ಕ್ವಿಂಟಾಲ್ ಉಪ್ಪಿಟ್ಟು ರವಾ, ೩ ಕ್ವಿಂಟಾಲ್ ಜೋಳ, ೨೫೦೦ ಸೀರೆಗಳು ಜೊತೆಗೆ ೯೦೬ ಶಾಲಾ ಮಕ್ಕಳಿಗೆ ಬ್ಯಾಗ್, ೫೦೦೦ ಕಿಂಗ್ ಸೈಜ್ ನೋಟಬುಕ್, ೯೦೬ ಪೆನ್, ಪೆನ್ಸಿಲ್, ರಬ್ಬರ್, ಮೆಂಡರ‍್ಸ್, ಸ್ಕೇಲ್ ಗಳ ಕಿಟ್‌ಗಳನ್ನು ನೀಡಲಾಗುವುದು.
ವಿಶೇಷವಾಗಿ ರಾಯಬಾಗ ತಾಲೂಕಿನ ೪೬೮ ಕುಟುಂಬಗಳಿಗೆ ೨೫ ಕೆಜಿಯಂತೆ ಪಶು ಆಹಾರವನ್ನು ನೀಡಲಾಗುವುದು. ಅಲ್ಲದೇ ಗೆಳೆಯರ ವೃಂದದಿಂದ ನೇರವಾಗಿ ರಾಮದುರ್ಗ ತಾಲೂಕಿನ ಸುನ್ನಾಳ ಮತ್ತು ಸುರೇಬಾನ ಸರ್ಕಾರಿ ಫ್ರೌಢಶಾಲೆಗಳಿಗೆ ಲ್ಯಾಪ್‌ಟಾಪ್, ಪ್ರೊಜೆಕ್ಟರ್, ಸ್ಕ್ರೀನ್, ಬ್ಯಾಟರಿ, ಪ್ರಿಂಟರ ಮತ್ತು ಯುಪಿಎಸ್ ಗಳನ್ನು ನೀಡಲಾಗುವುದು.
ಎಲ್ಲಾ ಸಾಮಾಗ್ರಿಗಳನ್ನು ತುಂಬಿದ ವಾಹನಗಳಿಗೆ, ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್ ಬಿ ಬೊಮ್ಮನಹಳ್ಳಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಎ ಬಿ ಮಗದುಮ್ಮ ಆಡಳಿತ ಮತ್ತು ಹಣಕಾಸು ವಿಭಾಗದ ಮುಖ್ಯಸ್ಥರು(ಐಡಿಎಫ್), ಕಣಬೂರ, ಸಹಾಯಕ ನಿರ್ದೇಶಕರು ವಾರ್ತಾ ಇಲಾಖೆ, ಹಿರಿಯ ಸಿಬ್ಬಂದಿಗಳಾದ ಮಂಜಪ್ಪ ದೇವಗೇರಿ, ಸಾತಪ್ಪ ಬಾವಕರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು -(ಪ್ರಗತಿವಾಹಿನಿ ಸುದ್ದಿ).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ