Kannada NewsKarnataka NewsLatest

4 ವೈದ್ಯರು ಸೇರಿ ಗೋಕಾಕಲ್ಲಿ 41 ಜನರಿಗೆ ಸೋಂಕು, ಡಿಸಿ, ಸಿಇಒ ಭೇಟಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ:  ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ -೧೯ ಮಹಾಮಾರಿ ಸಮುದಾಯಕ್ಕೆ ಹರಡುತ್ತಿದ್ದು, ಶನಿವಾರ ಒಂದೆ ದಿನದಲ್ಲಿ ೪೧ ಸೋಂಕಿತರು ಪತ್ತೆಯಾಗಿದ್ದು, ಲಾಕ್ ಡೌನ್ ಮಧ್ಯಯೂ ಜನರು ಅನಾವಶ್ಯಕವಾಗಿ ಹೊರಬರುವದನ್ನು ಮಾತ್ರ ನಿಲ್ಲಿಸುತ್ತಿಲ್ಲ.
ಗೋಕಾಕ ನಗರ ಸೇರಿದಂತೆ ತಾಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇನ್ನೂ  ಎರಡು ಸಾವಿರಕ್ಕೂ ಹೆಚ್ಚು ಸೋಂಕಿತರ ಗಂಟಲು ದ್ರವ(ಸ್ವ್ಯಾಬ್) ಪರೀಕ್ಷೆ ಬಾಕಿ ಇದೆ ಎನ್ನಲಾಗಿದೆ. ಶನಿವಾರ ಒಂದೇ ದಿನದಲ್ಲಿ ೪೧ ಸೋಂಕಿತರು ಕಂಡು ಬಂದಿದ್ದು ಲಾಕ್ ಡೌನ್ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ.

ನಾಲ್ವರು ವೈದ್ಯರು ಸೇರಿ ೪೧ಜನರಲ್ಲಿ ಕರೋನಾ:

ನಾಲ್ವರು ವೈದ್ಯರು ಸೇರಿ ತಾಲೂಕಿನ ೪೧ ಜನರಿಗೆ ಶನಿವಾರದಂದು ಕರೋನಾ ಸೋಂಕು ದೃಢಪಟ್ಟಿದೆ. ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ೬೯ ಜನರಿಗೆ ಕರೋನಾ ಪಾಸಿಟೀವ್ ಪತ್ತೆಯಾಗಿದ್ದು, ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದ ಸೋಂಕಿತರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಸೋಂಕು ದೃಢ ಪಟ್ಟವರಲ್ಲಿ ಸಾಮಾನ್ಯ ಲಕ್ಷಣಗಳುಳ್ಳ ಸೋಂಕಿತರಿಗೆ ನಗರದಲ್ಲಿ ಸಿದ್ಧಪಡಿಸಲಾದ ಕೋವಿಡ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಗೋಕಾಕ ನಗರದಲ್ಲಿ-೧೮, ಅಕ್ಕತಂಗೇರಹಾಳ-೮, ತವಗ-೯, ಕುಲಗೋಡ-೧. ತುಕ್ಕಾನಟ್ಟಿ-೧, ಬೆಟಗೇರಿ-೧, ಬಳೋಬಾಳ-೨ ಮತ್ತು ಮೂಡಲಗಿ ಪಟ್ಟಣದಲ್ಲಿ -೧ ಸೇರಿ ತಾಲೂಕಿನಲ್ಲಿ ೪೧ ಕರೋನಾ ಸೋಂಕು ದೃಢಪಟ್ಟಿದ್ದು, ಈ ಹಿಂದೆ ನಗರದ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮೂವರಲ್ಲಿ ಕರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರಲ್ಲು ಸೋಂಕು ಪತ್ತೆಯಾಗಿರುವದಾಗಿ ತಾಲೂಕ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.

೫೦೦ ಹಾಸಿಗೆಗಳ ಕೋವಿಡ್ ವಾರ್ಡ:

೫೦೦ ಹಾಸಿಗೆಗಳುಳ್ಳ ಕರೋನಾ ಕೇರ್ ಸಿದ್ದ ಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಟಾಸ್ಕಪೋರ್ಸ ಸಭೆಯಲ್ಲಿ ನಿರ್ಧರಿಸಿ ಸದ್ಯದಲ್ಲೆ ಕೋವಿಡ್ ಕೇರ್ ವಾರ್ಡ ಪ್ರಾರಂಭವಾಗಲಿದೆ. ಸಾರ್ವಜನಿಕರು ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಪತ್ರಿಕೆಗೆ ತಿಳಿಸಿದ್ದಾರೆ.

ಡಿಸಿ, ಸಿಇಒ ಭೇಟಿ

ಗೋಕಾಕ: ಕೊರೋನಾ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಹಾಸಿಗೆಗಳನ್ನು ಸಿದ್ಧಪಡಿಸಿದ್ಧ ತಾಲೂಕಾಡಳಿತಕ್ಕೆ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಪ್ರಶಂಸಿಸಿದರು.
ಅವರು, ಶನಿವಾರದಂದು ನಗರದ ಮೂರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಹೆಚ್ಚುವರಿ ಕೋವಿಡ್ ಕೇರ್ ಸೇಂಟರ್ ಸಿದ್ಧತೆ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಕೊರೋನಾ ಮಹಾಮಾರಿಯಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾದಲ್ಲಿ ಇನ್ನೂ ಹೆಚ್ಚಿನ ಹಾಸಿಗೆಯ ಕೋವಿಡ್ ಕೇರ್ ತೆರೆಯುವ ಅವಶ್ಯಕತೆ ಬಿದ್ದಲ್ಲಿ ತಕ್ಷಣವೇ ಸಿದ್ಧಪಡಿಸಿ ಸೋಂಕಿತರ ಚಿಕಿತ್ಸೆಗೆ ಅನುವುಮಾಡಿಕೊಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾತಿಯಿ ಸಿಇಒ ಡಾ.ಕೆ.ವಿ.ರಾಜೇಂದ್ರ, ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ತಾಲೂಕ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ತಾಪಂ ಇಓ ಬಸವರಾಜ ಹೆಗ್ಗನಾಯ್ಕ ಸೇರಿದಂತೆ ಅನೇಕರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button