Latest

ಮಹಾತ್ಮಾ ಗಾಂಧೀಜಿಯವರು ಇಡೀ ದೇಶಕ್ಕೆ ಪ್ರೇರಣಾಶಕ್ತಿ:ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಇಡೀ ದೇಶಕ್ಕೆ ಪ್ರೇರಣಾಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಪುಷ್ಪ ನಮನ ಸಲ್ಲಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಗಾಂಧೀಜಿ ಬದುಕಿನಲ್ಲಿ ಹಲವಾರು ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಅದರ ವಿರುದ್ಧ ಗಟ್ಟಿಯಾಗಿ ನಿಂತು ಹೋರಾಟವನ್ನು ಮಾಡಿದವರು. ದೇಶಕ್ಕಾಗಿ ತಮ್ಮ ಜೀವನವನ್ನು ಮತ್ತು ಸರ್ವಸ್ವವನ್ನು ತ್ಯಾಗ ಮಾಡಿದವರು. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ಹಾಗೂ ಆಯಾಮವನ್ನು ನೀಡಿದರು. ಸತ್ಯ ಹಾಗೂ ಅಹಿಂಸೆ ಎಂಬ ಎರಡು ಅಸ್ತ್ರಗಳನ್ನು ದೇಶಕ್ಕೆ ನೀಡಿದರು. ಆ ಸಂದರ್ಭದಲ್ಲಿ ಬಹಳ ಜನ ಈ ಬಗ್ಗೆ ತಮ್ಮದೇ ಅನುಮಾನಗಳನ್ನು ವ್ಯಕ್ತ ಪಡಿಸಿದ್ದರು. ಕಾಲಕ್ರಮೇಣ ಇವುಗಳು ದೈತ್ಯ ಬ್ರಿಟಿಷ್ ಸಾಮ್ರಾಜ್ಯ ದ ದಮನಕಾರಿ ನೀತಿಯ ವಿರುದ್ಧ ಜನಾಂದೋಲನ ಸೃಷ್ಟಿಯಾಗಿ ಕೊನೆಗೆ ಬ್ರಿಟಿಷರು ದೇಶವನ್ನು ಬಿಟ್ಟುಹೋಗುವ ಮಟ್ಟಕ್ಕೆ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವತಂತ್ರ ಹೋರಾಟವಾಗಿ ಸ್ವಾತಂತ್ರ್ಯವೂ ದೊರೆತಿದೆ ಎಂದರು.

ತೆರೆದ ಪುಸ್ತಕ
ಅವರೇ ಹೇಳಿದಂತೆ ಅವರ ಜೀವನವೇ ಒಂದು ತೆರೆದ ಪುಸ್ತಕ. ಅದೇ ನನ್ನ ಸಂದೇಶ ಎಂದಿದ್ದರು. ಸತ್ಯ, ಅಹಿಂಸೆಯ ಮಾರ್ಗವನ್ನು ಕೊನೆಯವರೆಗೂ ಬಿಡಲಿಲ್ಲ. ಇಂದಿಗೂ ನಮ್ಮ ದೇಶಕ್ಕೆ ಅಂತ:ಸತ್ವದ ಆತ್ಮ, ಪ್ರೇರಣೆಯಾಗಿದ್ದಾರೆ. ಅವರ ಹಲವಾರು ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಅದು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೆ ಈ ದೇಶದ ಆರ್ಥಿಕ, ಸಾಮಾಜಿಕ ಜೀವನದ ಮೇಲೂ ಪ್ರಭಾವ ಬೀರಿದೆ. ಗ್ರಾಮ ಸ್ವರಾಜ್ಯ ಎಂಬ ಅವರ ಘೋಷಣೆ, ಕೆಳ ಹಂತದಲ್ಲಿ ದೇಶವನ್ನು ಕಟ್ಟಲು ತಿಳಿಸಿದರು. ಭಾರತಕ್ಕೆ ಸಾಮೂಹಿಕ ಉತ್ಪಾದನೆಗಿಂತಲೂ ಭಾರತದ ಜನರಿಂದ ಉತ್ಪಾದನೆ ಮಾಡುವ ಅಗತ್ಯವಿದೆ ಎಂದ ಅವರ ನುಡಿಗಳು ಇಂದಿಗೂ ಪ್ರಸ್ತುತ ಎಂದರು.

ಇದೇ ದಾರಿಯಲ್ಲಿ ನಾವು ಮುಂದುವರೆದರೆ ಭಾರತ ಸಶಕ್ತ ರಾಷ್ಟ್ರವಾಗುವ ಜೊತೆಗೆ ಭಾರತೀಯರೆಲ್ಲರೂ ನೆಮ್ಮದಿಯ ಬದುಕನ್ನು, ಒಗ್ಗಟ್ಟಾಗಿ ಬದುಕಬಹುದು. ಅವರ ಜನ್ಮದಿನಾಚಾರಣೆಯಂದು ಅವರ ವಿಚಾರ ಹಾಗೂ ತತ್ವಗಳಿಗೆ ಅನುಗುಣವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಾವು ಸಂಕಲ್ಪ ಮಾಡುವ ಹಾಗೂ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳುವ ದಿನ ಎಂದರು.

ಶಾಸ್ತ್ರಿ ಅವರದ್ದು ರಾಜಿ ಇಲ್ಲದ ಕಠಿಣ ಜೀವನ
ಇಂದು ರಾಷ್ಟ್ರದ ಮತ್ತೊಬ್ಬ ಶ್ರೇಷ್ಠ ನಾಯಕ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಹೌದು. ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಡುವಿನ ಸಾಮ್ಯಗಳು ಬಹಳ. ಅವರ ಜನ್ಮ ದಿನಾಂಕ ಒಂದೇ ಆಗಿರುವುದು ಕೂಡ ಸಾಮ್ಯತೆಗಳ ಪ್ರತೀಕವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬಹಳ ದಿನಗಳು ನಮ್ಮ ದೇಶದ ಪ್ರಧಾನಿಗಳಾಗಿ ಇರಲಿಲ್ಲ, ಆದರೆ ಇಂದಿಗೂ ನಮ್ಮ ಜನಮಾನಸದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಅತ್ಯಂತ ಬಡತನದ ಹಿನ್ನೆಲೆಯಲ್ಲಿ ಬಂದರೂ , ತಮ್ಮ ಬದುಕಿನಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳಲಿಲ್ಲ. ಕಠಿಣವಾದ ಜೀವನವನ್ನೇ ನಡೆಸಿದರು. ಪ್ರಧಾನಿಗಳಾದರೂ ಕೂಡ, ಆದರ್ಶಗಳನ್ನು ಪಾಲಿಸಿದ ಮಹಾನ್ ವ್ಯಕ್ತಿ. ಹುದ್ದೆಯ ಅಧಿಕಾರ ಎಂದಿಗೂ ಸೋಂಕದಂತೆ ನಡೆದುಕೊಂಡರು. ದೇಶವನ್ನು ಅತ್ಯಂತ ದಕ್ಷ ಹಾಗೂ ಸಮರ್ಥವಾಗಿ ನಡೆಸಿದರು. ಇಂಡೋ -ಪಾಕಿಸ್ತಾನ ಯುಧದ ಸಂದರ್ಭದಲ್ಲಿ ಭಾರತದ ಗಡಿಗೆ ಹೋಗಿ ಸೈನಿಕರಲ್ಲಿ ಸ್ಫೂರ್ತಿ ತುಂಬಿದ ಮೊದಲನೇ ಉದಾಹರಣೆ, ಲಾಲ್ ಬಹದ್ದೂರ್ ಶಾಸ್ತ್ರಿ ಯುದ್ಧ ಗೆಲ್ಲಲು ಮಾರ್ಗದರ್ಶನವನ್ನು ನೀಡಿದರು. ನಂತರ, ದೇಶ ಆಹಾರ ಉತ್ಪಾದನೆ ಯಲ್ಲಿ ಸ್ವಾವಲಂಬಿಯಾಗಲು ಹಸಿರು ಕ್ರಾಂತಿಗೆ ಭದ್ರ ಬುನಾದಿಯನ್ನು ಹಾಕಿದರು. ದೇಶ ಕಾಯುವ ಹಾಗೂ ದೇಶಕ್ಕೆ ಅನ್ನ ಹಾಕುವವರಿಗಾಗಿ ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ಅತ್ಯಂತ ಗೌರವವನ್ನು ನೀಡಿದರು. ಅವರ ಆಡಳಿತ ನಮಗೆ ಆದರ್ಶ. ಸತ್ಯದಿಂದ ಆಡಳಿತ ನಡೆಸಿದರು. ಇದೆಲ್ಲವೂ ನಮಗೆ ಪ್ರೇರಣೆ ಆಗಿದೆ. ನಮ್ಮ ಆಡಳಿತಕ್ಕೆ ಅವರ ಮಾರ್ಗದರ್ಶನವಿದೆ ಎಂದರು.

BJPಯಲ್ಲಿ ಯಾರೂ ಬೇಲ್ ಮೇಲೆ ಇಲ್ವಾ? ಸಿಎಂಗೆ ಟಾಂಗ್ ನೀಡಿದ ಸಿದ್ದರಾಮಯ್ಯ

https://pragati.taskdun.com/politics/siddaramaiahcm-basavaraj-bommaiattack/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button