Kannada NewsKarnataka NewsLatest

ಶನಿವಾರ ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ; ಗಣ್ಯರ ದಂಡು ಬೆಳಗಾವಿಯತ್ತ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ :  ಅನನ್ಯ ಸಾಧಕ, ಕೆಎಲ್ಇ ಸಂಸ್ಥೆಯ ಚೇರಮನ್  ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನಾಚರಣೆ – ಅಮೃತಮಹೋತ್ಸವ ಶನಿವಾರ (ಅಕ್ಟೋಬರ್ 15) ಬೆಳಗಾವಿಯಲ್ಲಿ ನಡೆಯಲಿದೆ.

ಇಲ್ಲಿನ ನೆಹರೂ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ  ಮಧ್ಯಾಹ್ನ 2 ಗಂಟೆಗೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ 1 ಲಕ್ಷದಷ್ಟು ಅಭಿಮಾನಿಗಳು ಆಗಮಿಸಲಿದ್ದಾರೆ.

ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧಮೇಂದ್ರ ಪ್ರಧಾನ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಿಜೆಪಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಹಾರಾಷ್ಟ್ರದ ಸಚಿವ ರಾಧಾಕೃಷ್ಣ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಪಾಲ್ಗೊಳ್ಳಲಿದ್ದಾರೆ.

ಊಟ, ಪಾರ್ಕಿಂಗ್‌ಗೆ ವ್ಯವಸ್ಥೆ

ಅಮೃತ ಮಹೋತ್ಸವದಲ್ಲಿ ಭಾಗವಹಿಸಲು ಚಿಕ್ಕೋಡಿ ಕಡೆಯಿಂದ ಬರುವ ಜನರಿಗಾಗಿ ತಾಲೂಕಿನ ಭೂತರಾಮನಹಟ್ಟಿಯ ಮುಕ್ತಿಮಠ, ಗೋಕಾಕ ಕಡೆಯಿಂದ ಬರುವವರಿಗೆ ಕಣಬರ್ಗಿಯ ಸಂಕಲ್ಪ ಗಾರ್ಡನ್, ಬೈಲಹೊಂಗಲ ಕಡೆಯಿಂದ ಬರುವವರಿಗೆ ನಿಲಜಿ ಗಜಾನನ ಗಾರ್ಡನ್, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಕಿತ್ತೂರು ಭಾಗದಿಂದ ಬರುವವರಿಗೆ ಧರ್ಮನಾಥ ಭವನ, ಬೆಳಗಾವಿ ಗ್ರಾಮೀಣ ಭಾಗ, ನಗರ ಭಾಗ ಹಾಗೂ ಖಾನಾಪುರದಿಂದ ಬರುವವರಿಗೆ ನಾಗನೂರು ರುದ್ರಾಕ್ಷಿಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಾಂತೇಶ ನಗರ, ಬಾಕ್ಸೈಟ್ ರಸ್ತೆ, ಶ್ರೀನಗರ ಹಾಗೂ ಐಸಿಎಂಆರ್ ಆವರಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

 

1980ರ ದಶಕದಲ್ಲಿ ಕೆಎಲ್ಇ ಸಂಸ್ಥೆಯ ಚುಕ್ಕಾಣಿ ಹಿಡಿದು, 34 ಅಂಗಸಂಸ್ಥೆಗಳಿಂದ 293 ಅಂಗ ಸಂಸ್ಥೆಗಳಿಗೆ ಏರಿಸುವ ಮೂಲಕ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆ ಮಾಡುವ ಮೂಲಕ ಡಾ.ಪ್ರಭಾಕರ ಕೋರೆ ಸಮಾಜಕ್ಕೆ ಆದರ್ಶರೆನಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮೂಲಕ ಬೆಸೆಯುವ ಮೂಲಕ ಮತ್ತೊಂದು ಮಹತ್ಸಾಧನೆ ಮಾಡಿದ್ದಾರೆ. ಸಮಾಜದ ದೊಡ್ಡ ಆಸ್ತಿಯಾಗಿರುವ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಮೃತಮಹೋತ್ಸವ ಸಮಿತಿ ನಿರ್ಧರಿಸಿದೆ.

ಕೆಎಲ್ಇ ಸಂಸ್ಥೆ ಮಾತ್ರವಲ್ಲದೆ, ಸಕ್ಕರೆ ಕಾರ್ಖಾನೆ, ರಾಣಿ ಚನ್ನಮ್ಮ ಮಹಿಳಾ ಬ್ಯಾಂಕ್, ಅಂಕಲಿ ಸಹಕಾರಿ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ ಮೊದಲಾದವುಗಳ ಮೂಲಕ ಲಕ್ಷಾಂತರ ಜನರ ಜೀವನಕ್ಕೆ ಆಧಾರವಾಗಿದ್ದಾರೆ. 30 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಪ್ರಭಾಕರ ಕೋರೆ ಆಸರೆಯಾಗಿದ್ದಾರೆ.

ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ಕೊಡುಗೆಯಾಗಿ ೨೦೦೬ರಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಎಂಡ್ ರೀಸರ್ಚ್ (ಕಾಹೇರ್) ಸ್ಥಾಪಿಸಿದ್ದಾರೆ. ೨೦೧೫ರಲ್ಲಿ ಹುಬ್ಬಳ್ಳಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಡಾ. ಕೋರೆ ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

https://pragati.taskdun.com/pragativahini-special/dr-prabhakar-developed-not-only-kle-institute/

3 ರಾಜ್ಯಗಳ ಸಂಗಮವಾಗಲಿದೆ ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ: ಹರಿದು ಬರಲಿದ್ದಾರೆ ಲಕ್ಷಾಂತರ ಅಭಿಮಾನಿಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button