Latest

ಖಾಕಿ ಕಾವಲಿನಲ್ಲಿ ‘ಟಿಪ್ಪು ನಿಜ ಕನಸುಗಳು’ ಪ್ರದರ್ಶನ

 ಪ್ರಗತಿವಾಹಿನಿ ಸುದ್ದಿ, ಮೈಸೂರು: “ಇಡೀ ಹಿಂದುಸ್ಥಾನವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಪರಿವರ್ತಿಸುತ್ತೇನೆ” ಎಂದು ಕತ್ತಿ ಝಳಪಿಸುವ ಟಿಪ್ಪು. ಅಲ್ಲಿನ ಜನರನ್ನು ಕೊಂದಾದರೂ ಕೊಡಗನ್ನು ವಶಕ್ಕೆ ಪಡೆಯಬೇಕು ಎಂದು ಘರ್ಜಿಸುವ ಟಿಪ್ಪು. ಸಾಮಾನ್ಯ ಸೈನಿಕ ವೇಷ ಧರಿಸಿ ಟಿಪ್ಪು ಹತನಾದ ಎಂದು ಬಿಂಬಿಸಿರುವ ಲೇಖಕರು ಇವು ‘ಟಿಪ್ಪು ನಿಜ ಕನಸುಗಳು’ ನಾಟಕದಲ್ಲಿ ಕಂಡುಬರುವ ದೃಶ್ಯಗಳು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ಎಂಬ ಮೂರು ಗಂಟೆ ಅವಧಿಯ ನಾಟಕ ಭಾನುವಾರ ಸಂಜೆ ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನ ಕಂಡಿತು.

ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ, ಮಾಜಿಸ್ಪೀಕರ್ ಕೆ.ಜಿ.ಬೋಪಯ್ಯ, ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ, ಆರ್‌ಎಸ್‌ಎಸ್‌ನ ವಾ. ವೆಂಕಟರಾಮ್ ಮುಂತಾದ ಗಣ್ಯರು ನಾಟಕ ವೀಕ್ಷಿಸಿದರು.

“ಟಿಪ್ಪು ನಿಜ ಕನಸು ನಾಟಕದ ಬಗ್ಗೆ ಉತ್ಸುಕನಾಗಿದ್ದೆ. ಅಡ್ಡಂಡ ಕಾರ್ಯಪ್ಪ ಅವರು ನಾಟಕವನ್ನು ಉತ್ತಮವಾಗಿ ರೂಪಿಸಿದ್ದಾರೆ. ಕೊಡಗಿನಲ್ಲಿ ನಡೆದ ಸತ್ಯ ಘಟನೆಗಳನ್ನು ನಾಟಕದ ಮೂಲಕ ಯಶಸ್ವಿಯಾಗಿ ತಿಳಿಸಿಕೊಟ್ಟಿದ್ದಾರೆ. ನಾಟಕವನ್ನು ಎಲ್ಲರೂ ವೀಕ್ಷಿಸಬೇಕು” ಎಂದು  ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.

“ಟಿಪ್ಪು ನಿಜ ಕನಸು ನಾಟಕದಲ್ಲಿ ಸತ್ಯವನ್ನು ಮಾತ್ರ ಹೇಳಿದ್ದೇನೆ. ಇದರಲ್ಲಿ ನನ್ನ ಅಭಿಪ್ರಾಯಗಳೇನೂ ಇಲ್ಲ. ಇತಿಹಾಸಕಾರರು ಬರೆದಿರುವ ದಾಖಲೆಗಳ ಆಧಾರದಲ್ಲಿಯೇ ಟಿಪ್ಪು ಹೊಂದಿದ್ದ ನಿಜ ಕನಸುಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾಟಕ ಯಶಸ್ವಿಯಾಗಿ ನಡೆದಿದೆ. ಪ್ರೇಕ್ಷಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾಟಕವನ್ನು ಎಲ್ಲೆಡೆ ಪ್ರದರ್ಶಿಸಲಾಗುತ್ತದೆ” ಎಂದು ರಂಗಾಯಣ ನಿರ್ದೇಶಕ  ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

ಏನಿದೆ ನಾಟಕದಲ್ಲಿ?:

ರಣರಂಗದಲ್ಲಿ ಟಿಪ್ಪು ಹತನಾದ ದೃಶ್ಯದೊಂದಿಗೆ ನಾಟಕ ಆರಂಭವಾಗುತ್ತದೆ. ಯುದ್ಧ ಭೂಮಿಗೆ ಆಗಮಿಸುವ ಬ್ರಿಟಿಷರು, ಟಿಪ್ಪುವಿನ ಕಳೇಬರಕ್ಕಾಗಿ ಹುಡುಕಾಡುತ್ತಾರೆ. ಟಿಪ್ಪು ಸಾಮಾನ್ಯ ಸೈನಿಕ ವೇಷಧಾರಿಯಾಗಿ ಯುದ್ಧಕ್ಕೆ ಬಂದ ಎಂಬ ಮಾತುಗಳು, ಅವನು ಹುಲಿಯಲ್ಲ, ಇಲಿ ಎಂಬ ಮಾತುಗಳು ಪಾತ್ರಧಾರಿಗಳು ಬರುತ್ತದೆ. ಒಂದು ಧರ್ಮದ ಸೈನಿಕರು ಟಿಪ್ಪುವಿನ ಸಾವನ್ನು ಸಂಭ್ರಮಿಸುತ್ತಾರೆ. ಆತನ ಕಳೇಬರವನ್ನು ನಮಗೆ ನೀಡಿ. ಶ್ರೀರಂಗಪಟ್ಟಣದಲ್ಲಿ ಆತನ ಶವವನ್ನು ಮೆರವಣಿಗೆ ಮಾಡುತ್ತೇವೆ ಎಂದು ಕುಣಿದಾಡುತ್ತಾರೆ.

ನಂತರ ನಾಟಕವು ಕೊಡಗಿನತ್ತ ಸಾಗುತ್ತದೆ. ಅಲ್ಲಿನ ರಾಜ ದೊಡ್ಡವೀರಪ್ರಭು ಅವರ ಸಹೋದರ ಲಿಂಗರಾಜ ಅವರನ್ನು ಸೆರೆಮನೆಯಿಂದ ಬಿಡಿಸುವ ಟಿಪ್ಪು, ಆತನ ಸಹಾಯದಿಂದ ಕೊಡಗಿನ ಪ್ರಮುಖರನ್ನು ಭೋಜನ ಕೂಟಕ್ಕೆ ಕರೆಸಿ ಅವರಗಳನ್ನು ಮೋಸದಿಂದ ಬಂಧಿಸಿದ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ ಕೊಡಗಿನಲ್ಲಿ ಟಿಪ್ಪು ಸೈನಿಕರು ಕೊಡವರ ವಾರಣ ಹೋಮ ನಡೆಸಿದ ಎಂದು ತೋರಿಸಲಾಗುತ್ತದೆ.

ನಂತರ ಬಂಧಿತರನ್ನು ಶ್ರೀರಂಗಪಟ್ಟಣದವರೆಗೆ ನಡೆಸಿಕೊಂಡು ಹೋಗಬೇಕು. ಬರುವುದಿಲ್ಲ ಎಂದವರನ್ನು ಆನೆಯಿಂದ ಎಳೆಸಬೇಕು. ಇಲ್ಲವಾದಲ್ಲಿ ಅವರನ್ನು ಕೊಲ್ಲಬೇಕು. ಕೊಡಗಿನಲ್ಲಿ ಇಸ್ಲಾಂ ಧರ್ಮವನ್ನು ಬೆಳೆಸಬೇಕು. ಕುರಾನ್ ಪಠಣ ಎಲ್ಲೆಡೆ ಜರುಗಬೇಕು ಎಂದು ಟಿಪ್ಪು ಪಾತ್ರಧಾರಿ ವೀರಾವೇಶದಿಂದ ನುಡಿಯುತ್ತಾನೆ.ನಾಟಕದ ಉದ್ದಕ್ಕೂ ಟಿಪ್ಪು ಸುಲ್ತಾನ್ ಓರ್ವ ಮತಾಂಧ, ಆತನಿಂದ ಕೇರಳ, ಕೊಡಗು ಇನ್ನಿತರ ಕಡೆಗಳಲ್ಲಿ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಯಿತು, ಚಿತ್ರದುರ್ಗದ ಮದಕರಿ ನಾಯಕ ಸೇರಿದಂತೆ ಸಾಮಂತರನ್ನು ಹತ್ಯೆಗಯ್ಯಲಾಗಿತ್ತು ಎಂಬುದನ್ನು ಕಟ್ಟಿಕೊಡಲಾಗಿದೆ.

ಖಾಕಿ ಕಾವಲು: ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಎಸಿಪಿ ಗಂಗಾಧರಸ್ವಾಮಿ, ಐವರು ಇನ್ಸಪೆಕ್ಟರ್ ಸೇರಿದಂತೆ ಸುಮಾರು 150 ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ರಂಗಾಯಣದಲ್ಲಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಟಿಕೆಟ್ ಖರೀದಿಸಿ ನಾಟಕ ನೋಡಲು ಬರುವವರನ್ನು ಸಂಪೂರ್ಣ ತಪಾಸಣೆಗೊಳಪಡಿಸಿ ಪೊಲೀಸರು ಭೂಮಿಗೀತ ಆವರಣಕ್ಕೆ ಬಿಡುತ್ತಿದ್ದುದು ಕಂಡುಬಂತು. ಅನುಮಾನಾಸ್ಪದ ವ್ಯಕ್ತಿಗಳನ್ನು ಕೂಲಂಕಷವಾಗಿ ತಪಾಸಣೆ ಮಾಡುತ್ತಿದ್ದುದು ಕಂಡುಬಂತು.

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋಮೂತ್ರದಿಂದ ಟ್ಯಾಂಕ್ ಸ್ವಚ್ಛತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button