ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಡಿಭಾಗದ ಕನ್ನಡಿಗರ ಸಮಸ್ಯೆ ಆಲಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ ಮೊದಲನೇ ವಾರದಲ್ಲಿ ಮಹಾರಾಷ್ಟ್ರ ಕನ್ನಡರಿಗೆ ಆಹ್ವಾನ ನೀಡಿದ್ದಾರೆ ಎಂದು ಸಾಂಗ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಕನ್ನಡ ಹೋರಾಟಗಾರ ಮಹಾದೇವ ಅಂಕಲಗಿ ಹೇಳಿದರು.
ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಮಡಗ್ಯಾಳ ಗ್ರಾಮದಲ್ಲಿ ಕರವೇ ಗೋಕಾಕ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
“ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿ ವಾಸಿಸುವ ಕನ್ನಡ ಜನರ ಮೇಲೆ ಪ್ರೀತಿ ತೋರಿದ್ದಾರೆ. 2012 ರಲ್ಲಿ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಸಹ ನಾವು ಮನವಿ ಸಲ್ಲಿಸಿದ್ದೆವು. ನಮ್ಮ ಮನವಿ ಪತ್ರಕ್ಕೆ ಸ್ವಂದಿಸಿ ಅವರೂ ಸಹ ನಮಗೆ ಭರವಸೆ ನೀಡಿದ್ದರು. ಈಗ ಬೊಮ್ಮಾಯಿಯವರು ನಮಗೆ ಭೇಟಿಯಾಗಲು ಅವಕಾಶ ನೀಡಿದ್ದಾರೆ,” ಎಂದರು.
“ಬೊಮ್ಮಾಯಿಯವರಿಗೆ ಮಹಾರಾಷ್ಟ್ರ ಕನ್ನಡಿಗರು ಆಭಾರಿಯಾಗಿದ್ದೇವೆ. ಕರ್ನಾಟಕ ಸರಕಾರದ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ. ಆದಷ್ಟೂ ಬೇಗ ಮಹಾರಾಷ್ಟ್ರದ ಕನ್ನಡಿಗರ ಸಮಸ್ಯೆಗಳಿಗೆ ಸ್ವಂದಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕಳೆದ ಹಲವು ದಶಕಗಳಿಂದ ಮಹಾರಾಷ್ಟ್ರ ಕನ್ನಡಿಗರಾದ ನಾವು ನೀರಾವರಿ ಮತ್ತು ಶೈಕ್ಷಣಿಕ ಸೌಲಭ್ಯಗಳಿಗೆ ಆಗ್ರಹಿಸಿ ಹೋರಾಟ ನಡೆಸುತ್ತಾ ಬಂದಿದ್ದೇವೆ” ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ಕರವೇ ಮುಖಂಡ ಬಸವರಾಜ ಖಾನಪ್ಪನವರ ಮಾತನಾಡಿ, “ಮಹಾರಾಷ್ಟ್ರ ಸರಕಾರ ಗಡಿಭಾಗದ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದೆ. ನೀರಾವರಿ ಸೌಲಭ್ಯಗಳಾಗಲಿ, ಶೈಕ್ಷಣಿಕ ಸೌಲಭ್ಯಗಳಾಗಲಿ ಒದಗಿಸುವಲ್ಲಿ ಮಲತಾಯಿ ಧೋರಣೆ ತೋರುತ್ತಿರುವುದನ್ನು ಕರವೇ ಖಂಡಿಸುತ್ತದೆ. ಮಹಾರಾಷ್ಟ್ರ ಕನ್ನಡಿಗರು ಕರ್ನಾಟಕ ರಾಜ್ಯಕ್ಕೆ ಸೇರುವ ಠರಾವುಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯೆ ಪ್ರವೇಶಿಸಿ ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಿ ಅವರನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕು,” ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಹಾ ಕನ್ನಡಿಗರಿಗೆ ಕನ್ನಡ ಧ್ವಜ ಹಸ್ತಾಂತರಿಸಿ ಕರ್ನಾಟಕಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಕನ್ನಡ ಮುಖಂಡರಾದ ಕೇಶವರಾವ ಪಾಟೀಲ, ಪ್ರಕಾಶ ಕಣಮಾಡೆ, ಅರವಿಂದ್ ಮಾಳಿ, ಬಾಳಪ್ಪ ಗೇಜಗೆ, ಗುರುರಾಜ ಲವಗಿ ಉಪಸ್ಥಿತರಿದ್ದರು.
ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್; ಹೆಡ್ ಕಾನ್ಸ್ ಟೇಬಲ್ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ