
ವಿಕ ಸುದ್ದಿಲೋಕ ಬೆಳಗಾವಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನವನ್ನು ಡಿ.24 ರಿಂದ ಮೂರು ದಿನಗಳ ಕಾಲ ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಘಟಕದ ಉಪಾಧ್ಯಕ್ಷ ರುದ್ರಣ್ಣ ಹೊಸಕೆರೆ ಹೇಳಿದರು.
ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1904ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪಿತವಾಗಿದ್ದು, ಕಳೆದ 118 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ವೀರಶೈವ ಲಿಂಗಾಯತರನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟಿಸುವ ಉದ್ದೇಶದಿಂದ ಈವರೆಗೆ 22 ಮಹಾ ಅಧಿವೇಶನ ನಡೆದಿದೆ ಎಂದರು.
23ನೇ ಮಹಾ ಅಧಿವೇಶನವನ್ನು ಡಿ.24 ರಂದು ಮಹಾ ಅಧಿವೇಶನ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ. ಈ ಮೊದಲು ಹಾವೇರಿ, ಮೈಸೂರು, ಕೊಡುಗು, ಹಾವೇರಿಯಲ್ಲಿ ನಡೆಸಲಾಗಿತ್ತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ ಅಭಿಲಾಷೆಯಂತೆ ದಾವಣಗೆರೆಯಲ್ಲಿ ಮಹಾ ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ ಎಂದರು.
ಮಹಿಳಾ ಸಬಲೀಕರಣ, ವೀರಶೈವ ಲಿಂಗಾಯತ ಮಹಾಸಭಾದ ಕುರಿತ ವಿಚಾರ ಗೋಷ್ಠಿ, ಮಾಧ್ಯಮದವರಿಗೆ ಅರಿವು ಕಾರ್ಯಾಗಾರ ಸೇರಿದಂತೆ ಹಲವಾರು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರತ್ನಪ್ರಭಾ ಬೆಲ್ಲದ, ಜ್ಯೋತಿ ಭಾವಿಕಟ್ಟಿ, ರಮೇಶ ಕಳಸಣ್ಣವರ ಇನ್ನಿತರರು ಉಪಸ್ಥಿತರಿದ್ದರು.
ಅಪರಾಧಿ ಬಿಟ್ಟು ಇನ್ನಾರದೋ ಬಂಧನ; ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ