ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗದಿಂದ ಮನವಿ ಸಲ್ಲಿಸಿದರು.
ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆದಷ್ಟು ಶೀಘ್ರವಾಗಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
*ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಶೋತ್ತರಗಳು ಈಡೇರಬೇಕು*
ಒಕ್ಕಲಿಗ ಸಮುದಾಯದ ಎಲ್ಲಾ ಶಾಸಕ ಮಿತ್ರರು ಒಕ್ಕಲಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಶೋತ್ತರಗಳು ಈಡೇರಬೇಕು, ಅವಕಾಶಗಳು ಹೆಚ್ಚಾಗಬೇಕೆಂಬ ಹಿನ್ನೆಲೆಯಲ್ಲಿ ಈಗಿನ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾಗಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಅದೇ ಸಮುದಾಯಕ್ಕೆ ಹೊಂದಿಕೊಂಡಿರುವ ರೆಡ್ಡಿ, ಬಂಟ ಸೇರಿದಂತೆ ಎಲ್ಲಾ ಸಮುದಾಯದ ಮೀಸಲಾತಿ ಅಗತ್ಯ. ಕುಂಚಿಟಿಗ ಸಮುದಾಯದ್ದು ಕೇಂದ್ರದ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಸಮುದಾಯವನ್ನು ಕೇಂದ್ರದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ ಎಂದರು.
*ಪರಿಶೀಲನೆ*
ಈ ಹಿಂದೆಯೇ ಡಾ: ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮನವಿಯನ್ನು ಕೊಟ್ಟಿದ್ದರು. ಆ ಮನವಿಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗಿದೆ. ಅದರ ಪರಿಷ್ಕರಣೆ ಕೂಡ ಆಗುತ್ತಿದೆ. ಸಂವಿಧಾನ ದಟ್ಟವಾದ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಅಗತ್ಯವಿದೆ. ಹೀಗಾಗಿ ಕಳೆದ ಮಾಹೆಯ 29 ನೇ ತಾರೀಖಿನಂದೇ ಕಳುಹಿಸಲಾಗಿದೆ. ಇದರ ಅಂಶಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈಗಿನ ಮನವಿಯನ್ನೂ ಆಯೋಗಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ನಿಯೋಗದಲ್ಲಿ ಸಚಿವರಾದ ಆರ್ ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಸುಧಾಕರ್, ಡಾ.ನಾರಾಯಣಗೌಡ ಹಾಗೂ ಶಾಸಕರು ಹಾಜರಿದ್ದರು.
*ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಚಿಂತನೆ *
https://pragati.taskdun.com/obavva-atmarakshana-kale-karatecm-basavaraj-bommaisuvarnavidhanasoudha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ