ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ಧಿ ಮಹಾಮಾರ್ಗ್‌ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 26 ಜನರು ಸಜೀವ ದಹನಗೊಂಡಿದ್ದು ಏಳು ಜನ ಗಂಭೀರ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಜಿಲ್ಲೆಯ ಪಿಂಪಲಖುಟಾ ಗ್ರಾಮದಲ್ಲಿ ದುಸರ್ಬಿಡ್ ಮತ್ತು ಸಿಂಡ್ಕೇಡ್ರಾಜ್ ನಡುವೆ ಬೆಳಗಿನಜಾವ 1.26 ಕ್ಕೆ ಅಪಘಾತ ಸಂಭವಿಸಿದೆ. ಬಸ್ ನ ಟೈರ್ ಒಡೆದ ನಂತರ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಮೀಡಿಯನ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ವೇಳೆ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದು ಹೊರಬರಲಾಗದೆ 26 ಜನ ಸಜೀವ ದಹನಗೊಂಡಿದ್ದಾರೆ.
ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದ ವಿದರ್ಭ ಟ್ರಾವೆಲ್ಸ್ ಬಸ್‌ನಲ್ಲಿ ಒಟ್ಟು 33 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬದುಕುಳಿದವರನ್ನು ತಕ್ಷಣದ ವೈದ್ಯಕೀಯ ಸಹಾಯಕ್ಕಾಗಿ ಸಿಂಡ್ಕೇಡ್ರಾಜ ಮತ್ತು ಬುಲ್ಧಾನದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ ಪಲ್ಟಿಯಾಗಿ ಅದರ ಎಡಭಾಗ ನೆಲಕ್ಕೊರಗಿ ನಿಂತಿತು. ಬಾಗಿಲು ಹೂತುಹೋಗಿದ್ದರಿಂದ ಹೊರಬರುವ ಮಾರ್ಗವಿಲ್ಲ. “ದುರಂತವೆಂದರೆ, ಪ್ರಯಾಣಿಕರು ಒಳಗೆ ಸಿಲುಕಿಕೊಂಡರು. ಅವರು ಸಾಯುತ್ತಿರುವುದನ್ನು ನಾವು ನೋಡಿದ್ದೇವೆ ಆದರೆ ವಾಹನವು ಬೆಂಕಿಯಲ್ಲಿ ಮುಳುಗಿದ್ದರಿಂದ ಸಹಾಯ ನೀಡುವ ಸ್ಥಿತಿಯಲ್ಲಿರಲಿಲ್ಲ. ಡೀಸೆಲ್ ಟ್ಯಾಂಕ್ ಅಥವಾ ಟ್ಯಾಂಕ್‌ನಿಂದ ಎಂಜಿನ್‌ಗೆ ಸರಬರಾಜು ಮಾಡುವ ಪೈಪ್ ಒಡೆದಿದ್ದರಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸಂತ್ರಸ್ತರಿಗೆ ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದ ವಕೀಲ ಸಂದೀಪ್ ಹೇಳಿದ್ದಾರೆ
ಸದ್ಯ ಪೊಲೀಸರಿಗೆ ಶವಗಳ ಗುರುತು ಪತ್ತೆ ಹಚ್ಚುವುದು ಕಠಿಣವಾಗಿ ಪರಿಣಮಿಸಿದ್ದು, ಟ್ರಾವೆಲ್ಸ್ ದಾಖಲೆಗಳನ್ನು ಪರಿಶೀಲಿಸಿ ಶವಗಳನ್ನು ತೆಗೆಯುವ ಕಾರ್ಯ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ