ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿಂನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟಲಿದೆ. ಒಂದೆಡೆ ಗ್ಯಾರಂಟಿ ಯೋಜನೆ ಜಾರಿಗಾಗಿ ಒತ್ತಾಯಿಸಿ ಬಿಜೆಪಿ ಧರಣಿ ನಡೆಸಲು ಮುಂದಾಗಿದ್ದರೆ, ಮತ್ತೊಂದೆಡೆ ನೇಮಕಾತಿ ಆರ್ಡರ್ ಗೆ ಒತ್ತಾಯಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದು, ನೇಮಕಾತಿ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆದು ಒಂದು ವರ್ಷ ಕಳೆದರೂ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಇನ್ನೂ ಸ್ಥಳ ನಿಯೋಜನೆ, ನೇಮಕಾತಿ ಆದೇಶ ಪತ್ರ ಸಿಕ್ಕಿಲ್ಲ. ಇರುವ ಕೆಲಸವನ್ನೂ ಕಳೆದುಕೊಂಡು, ಶಾಲಾ ಶಿಕ್ಷಕರ ನೇಮಕಾತಿಯೂ ಇಲ್ಲದೇ ನಿರುದ್ಯೋಗಿಗಳಾಗಿದ್ದೆವೆ, ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ ಎಂದು ಸಂಕಷ್ಟ ತೋಡಿಕೊಂಡಿದ್ದಾರೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 70,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 13,352 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ನೇಮಕಾತಿ ವಿಷಯದಲ್ಲಿ ಕಾನೂನು ಸಮಸ್ಯೆ ಮುಂದಿಟ್ಟು ಕೆಲ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದಾಗಿ ಆಯ್ಕೆಗೊಂಡ ಅಭ್ಯರ್ಥಿಗಳಿಗೂ ಸಂಕಷ್ಟ ಎದುರಾಗಿದ್ದು, ಆಯ್ಕೆಗೊಂಡಿರುವ ಅಭ್ಯರ್ಥಿಗಳ ಸ್ಥಳ ನಿಯೋಜನೆ, ನೇಮಕಾತಿ ಆದೇಶಕ್ಕೆ ವಿಳಂಬವಾಗಿದೆ.
ಈಗಾಗಲೇ ಅಭ್ಯರ್ಥಿಗಳು ಖಾಸಕಿ ಶಿಕ್ಷಣ ಸಂಸ್ಥೆಯಲ್ಲಿ ಇದ್ದ ಕೆಲಸ ಕಳೆದುಕೊಂಡಿದ್ದಾರೆ. ಅಭ್ಯರ್ಥಿಗಳು ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕೆಲಸದಿಂದ ತೆಗೆದು ಹಾಕಿವೆ. ಮೂಲ ದಾಖಲಾತಿಗಳನ್ನು ಶಿಕ್ಷಣ ಇಲಾಖೆಗೆ ನೀಡಿರುವುದರಿಂದ ಬೇರೆಡೆ ಕೆಲಸಕ್ಕೆ ಸೇರುವುದು ಕಷ್ಟವಾಗಿದೆ.
ಅತ್ತ ಇರುವ ಉದ್ಯೋಗವನ್ನೂ ಕಳೆದುಕೊಂಡು , ಇತ್ತ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ನೇಮಕಾತಿಯೂ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಇನ್ನೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಶಿಕ್ಷಿಅಣ ಕುಂಠಿತವಾಗುತ್ತಿದೆ. ತಕ್ಷಣ ಸರ್ಕಾರ ಅಭ್ಯರ್ಥಿಗಳ ಸಮಸ್ಯೆ ಬಗೆಹರಿಸಿ ನೇಮಕಾತಿ ಆದೇಶ ಹೊರಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ