Belagavi NewsBelgaum NewsKannada NewsKarnataka News

ಶೀಘ್ರವೇ ಹೊಸ ಜಿಲ್ಲೆಯಾಗಿ ಚಿಕ್ಕೋಡಿ, ಗೋಕಾಕ; ಬೆಳಗಾವಿ ತಾಲೂಕು ವಿಭಜನೆ; ಸಚಿವ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ಗೋಕಾಕ್ ಹೊಸ ಜಿಲ್ಲೆಗಳನ್ನಾಗಿ ಘೋಷಿಸುವುದರೊಂದಿಗೆ ವಿಶಾಲವಾಗಿರುವ ಬೆಳಗಾವಿ ತಾಲೂಕನ್ನು ಬೆಳಗಾವಿ ನಗರ ಹಾಗೂ ಗ್ರಾಮೀಣ ತಾಲೂಕುಗಳಾಗಿ ವಿಭಜಿಸಲು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲೇ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಮಾಧ್ಯಮದವರೊಂದಿಗೆ ಅವರು ಮಂಗಳವಾರ ಮಾತನಾಡಿದರು.

ಬೆಳಗಾವಿ ಜಿಲ್ಲೆಯ ವಿಭಜನೆ ಕುರಿತು ಈಗಾಗಲೇ ಜಿಲ್ಲೆಯ ಶಾಸಕರ ಜತೆ ಚರ್ಚೆಗಳನ್ನು ನಡೆಸಲಾಗುತ್ತಿದೆ. ಚಿಕ್ಕೋಡಿ ಹಾಗೂ ಗೋಕಾಕ್ ಎರಡು ಜಿಲ್ಲೆಗಳ ಪ್ರಸ್ತಾವ ಇರಿಸಲಾಗಿದ್ದು, ಸೂಕ್ತ ನಿರ್ಣಯಗಳೊಂದಿಗೆ ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದರು.

“ಬೆಳಗಾವಿ ತಾಲೂಕು ವಿಭಜನೆ ಖಚಿತವಾಗಿದ್ದು, ಈ ಸಂಬಂಧದಲ್ಲಿ ಈಗಾಗಲೇ ಅಧಿಕಾರಿಗಳ ಜತೆ ಚರ್ಚೆ ನಡೆದಿದೆ. ಯಾವ ರೀತಿಯಲ್ಲಿ ವಿಭಜನೆ ಮಾಡಬೇಕೆಂಬುದನ್ನು ಅಧಿಕಾರಿಗಳೇ ನಿರ್ಧರಿಸಲಿದ್ದಾರೆ” ಎಂದು ಅವರು ಹೇಳಿದರು.

“ಹಿಂದೆ ನಮ್ಮ ಸರಕಾರವಿದ್ದಾಗಲೂ ಈ ಬಗ್ಗೆ ಚಿಂತನೆ ಮಾಡಿದ್ದೆವು. ಹೊಸ ನಗರಕ್ಕೆ ಹಾಗೂ ಜಿಲ್ಲೆಗೆ ಬೇಕಾದ ಅಗತ್ಯತೆಗಳ ಬಗ್ಗೆ ಪರಾಮರ್ಷೆಗಳು ನಡೆದಿವೆ. ನಗರದಲ್ಲಿ ಹೊಸ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ನಮ್ಮ ಆದ್ಯತೆಯಾದ ಸುಪರ್ ಸ್ಪಷಾಲಿಟಿ ಆಸ್ಪತ್ರೆ ಅಡಿಗಲ್ಲು ಕೂಡ ಇರಿಸಲಾಗಿದೆ. ಇನ್ನು ಆರು ತಿಂಗಳಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಇದರೊಂದಿಗೆ ಕಿದ್ವಾಯಿ ಆಸ್ಪತ್ರೆ ಸ್ಥಾಪನೆಗೂ ಬೇಡಿಕೆಯಿದ್ದು ಅದನ್ನೂ ಶೀಘ್ರ ನೆರವೇರಿಸಲಾಗುತ್ತಿದೆ. ಈ ಎಲ್ಲ ಅಭಿವೃದ್ಧಿಯೊಂದಿಗೆ ಒಳ್ಳೆಯ ಬೆಳಗಾವಿ ಅಥವಾ ಎರಡನೇ ರಾಜಧಾನಿಯಾಗಿಸಲು ಜನರ ಸಹಕಾರ ಬೇಕಿದೆ. ಇವೆಲ್ಲವನ್ನೂ ಜನರ ಅನುಕೂಲಕ್ಕಾಗಿಯೇ ಮಾಡಲಾಗುತ್ತಿದೆ” ಎಂದು ಹೇಳಿದರು.

“ಅಭಿವೃದ್ಧಿಗೆ ನೀಡಲು ಸರಕಾರದ ಬಳಿ ಅನುದಾನ ಇಲ್ಲ ಎಂಬುದು ತಪ್ಪು ಕಲ್ಪನೆ. ಹೊಸ ಬಜೆಟ್ ಮಂಡನೆಯಾಗಿದ್ದು ಬೊಮ್ಮಾಯಿ ಸರಕಾರದಲ್ಲಿ. ಅದರ ಅನುಷ್ಠಾನದಲ್ಲಿ ಯಾವುದೇ ಅಡಚಣೆ ಇಲ್ಲ. ಹೆಚ್ಚುವರಿ 40 ಸಾವಿರ ಕೋಟಿ ಕೋಟಿಯನ್ನು ಸಿಎಂ ಸಿದ್ದರಾಮಯ್ಯನವರು ಬೇರೆಬೇರೆ ಮೂಲಗಳಿಂದ ಕೂಡಿಸಿ ಎಲ್ಲ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗುವುದು” ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

“ಈಗಾಗಲೇ ಬೆಳಗಾವಿಯಲ್ಲಿ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿಗೆ ಹೆಚ್ಚುವರಿ 70 ಕೋಟಿ ಅನುದಾನ ನೀಡಿದ್ದು ಇನ್ನೂ 70 ಕೋಟಿ ಇನ್ನು ಆರು ತಿಂಗಳ ನಂತರ ನೀಡುವುದು ದೊಡ್ಡ ವಿಷಯವೇನಲ್ಲ ಎಂದ ಸಚಿವರು, ಖಾಸಗಿ ಆಸ್ಪತ್ರೆಗಳಲ್ಲಿರುವ ಹೈಟೆಕ್ ಸೇವೆಗಳನ್ನು ಸರಕಾರಿ ಆಸ್ಪತ್ರೆಯಲ್ಲೂ ನೀಡಲು ಪ್ರಯತ್ನಿಸಲಾಗುವುದು. ಒಂದೇ ಬಾರಿ ಖಾಸಗಿ ಆಸ್ಪತ್ರೆಗಳನ್ನು ಓವರ್ ಟೇಕ್ ಮಾಡಲಾಗದು. ಸೂಕ್ತ ಸಿಬ್ಬಂದಿ, ಉಪಕರಣಗಳೊಂದಿಗೆ ಉಚಿತ ಸೇವೆಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.

ಶಾಸಕ ರಾಜು ಸೇಠ್, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button