ಅತೃಪ್ತ ಶಾಸಕರಲ್ಲಿ ಯಾರಿಗೆಲ್ಲಾ ಸಿಗುತ್ತೆ ಮಂತ್ರಿಗಿರಿ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಬಿಎಸ್.ವೈ ಕ್ಯಾಬಿನೆಟ್ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಏಕಾಂಗಿಯಾಗಿ ಬಿಎಸ್ ವೈ ಪ್ರಮಾಣ ವಚನ ಸ್ವೀಕರಿಸಿದ್ದೇನೋ ಆಯಿತು, ಈಗ ಎಲ್ಲರನ್ನೂ ಕುತೂಹಲಕ್ಕೀಡು ಮಾಡಿರುವುದು ಯಾರಿಗೆಲ್ಲಾ ಸಿಗುತ್ತೆ ಮಂತ್ರಿ ಭಾಗ್ಯ ಎಂಬ ಪ್ರಶ್ನೆ.
ಈಗ ನಿಜಕ್ಕೂ ದೊಡ್ಡ ಸವಾಲಿನ ವಿಷಯ ಯಡಿಯೂರಪ್ಪನವರ ಮುಂದಿದೆ, ಅತೃಪ್ತ ಶಾಸಕರು ಒಂದೆಡೆಯಾದರೆ, ಯಡಿಯೂರಪ್ಪ ಹೊರತುಪಡಿಸಿ ನೂರಾ ನಾಲ್ಕು ಶಾಸಕರು ಇನ್ನೊಂದೆಡೆ …
ಇವರನ್ನು ಸರಿಯಾಗಿ ಬ್ಯಾಲೆನ್ಸ್ ಮಾಡುವ ಸವಾಲು ಯಡಿಯೂರಪ್ಪನವರ ಮೇಲಿದೆ, ಕತ್ತಿ ಮೇಲಿನ ನಡಿಗೆಯಾಗಿದ್ದು ಇಲ್ಲಿ ಯಡಿಯೂರಪ್ಪ ಸ್ವಲ್ಪ ಯಾಮಾರಿದರೂ ಅಂತಃ ಕಲಹಕ್ಕೆ ಮತ್ತೆ ಮುನ್ನುಡಿ ಬರೆದಂತಾಗುತ್ತದೆ.
ಪ್ರತಿ ನಿರ್ಣಯದಲ್ಲೂ ಜಾಗರೂಕವಾಗಿ ಹೆಜ್ಜೆ ಇಡಬೇಕಾಗುತ್ತದೆ, ಸದ್ಯ ಯಡಿಯೂರಪ್ಪನವರಿಗೆ ಸಂಭ್ರಮದ ನಡುವೆಯೂ ಟೆನ್ಷನ್ ಹೆಚ್ಚಾಗಿದೆ, ಈಗ ಎಲ್ಲರನ್ನೂ ಸಮಾಧಾನ ಪಡಿಸುವುದು ದೊಡ್ಡ ಸಾಹಸ.
ಸದ್ಯ ಮೈತ್ರಿ ಸರ್ಕಾರದಿಂದ ಹೊರಬಂದು ನಿಷ್ಠೆ ಬದಲಿಸಿರುವ ಅತೃಪ್ತ ಶಾಸಕರ ಈಗಿನ ಪರಿಸ್ಥಿತಿ ಅತಂತ್ರವಾಗಿದೆ, ಆಗಿದ್ದರೂ ಪರಿಸ್ಥಿತಿ ಸುಧಾರಿಸಿ ಬಿ.ಎಸ್.ವೈ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರೆಲ್ಲರೂ ಮಂತ್ರಿ ಸ್ಥಾನಕ್ಕೆ ರೆಡಿಯಾಗಿ ನಿಂತಿದ್ದಾರೆ.
ಅತೃಪ್ತ ಪಾಳಯದಿಂದ ಸಿಕ್ಕ ಮಾಹಿತಿ ಪ್ರಕಾರ ಅತೃಪ್ತ ಎಲ್ಲಾ ಶಾಸಕರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಕಷ್ಟ. ಒಂದು ವೇಳೆ ಅತೃಪ್ತ ಶಾಸಕರೆಲ್ಲರಿಗೂ ಮಂತ್ರಿ ಸ್ಥಾನ ಸಿಕ್ಕರೆ, ಬಿಜೆಪಿಯ 104 ಶಾಸಕರಲ್ಲಿ ಯಾರಿಗೆ ತಪ್ಪ ಬಹುದು ಮಂತ್ರಿಗಿರಿ ?
ಅಕಸ್ಮಾತ್ ಎಲ್ಲಾ ಅತೃಪ್ತ ಶಾಸಕರಿಗೂ ಮಂತ್ರಿ ಪಟ್ಟ ಸಿಕ್ಕರೆ, ಅವರ ಪಟ್ಟಿ ಈಗಿದೆ.
ಹೆಚ್.ವಿಶ್ವನಾಥ್ ( ಹುಣಸೂರು ), ಬಿಸಿ.ಪಾಟೀಲ್ (ಹಿರೇಕೆರೂರು), ರೋಷನ್ ಬೇಗ್ ( ಶಿವಾಜಿನಗರ), ಬೈರತಿ ಬಸವರಾಜ್ ( ಕೆ.ಆರ್.ಪುರಂ), ಮುನಿರತ್ನಂ ನಾಯ್ಡು (ರಾಜ ರಾಜೇಶ್ವರಿ ನಗರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಎಂ.ಟಿ.ಬಿ ನಾಗರಾಜ್ (ಹೊಸಕೋಟೆ), ಡಾ.ಕೆ ಸುಧಾಕರ್ (ಚಿಕ್ಕಬಳ್ಳಾಪುರ), ಆನಂದ್ ಸಿಂಗ್ (ವಿಜಯನಗರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ಶಿವರಾಂ ಹೆಬ್ಬಾರ್ ( ಯಲ್ಲಾಪುರ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್ ), ನಾರಾಯಣ ಗೌಡ ( ಕೆ.ಆರ್.ಪೇಟೆ), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಪಕ್ಷೇತರರಲ್ಲಿ ಆರ್.ಶಂಕರ್ ಮತ್ತು ನಾಗೇಶ್ ಇದ್ದಾರೆ.
ಆದರೆ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಶಂಕರ್ ಅವರನ್ನು ಸ್ಪೀಕರ್ ಅನರ್ಹ ಗೊಳಿಸಿರುವುದರಿಂದ ಕೋರ್ಟ್ ನಿಂದ ರಿಲೀಫ್ ಸಿಗುವ ತನಕ ಮಂತ್ರಿ ಗಿರಿ ಕಷ್ಟ. ಇನ್ನು ಶಿವಾಜಿನಗರ ಶಾಸಕ ರೋಷನ್ ಬೇಗ್ ಬೆನ್ನ ಮೇಲೆ ಬಿದ್ದಿರುವ ಐಎಂಎ ಹಗರಣದಿಂದ ತೊಂದರೆಯಾಗುವ ಸಾಧ್ಯತೆಯಿದೆ.
ಅಲ್ಲದೆ, ಈನಡುವೆ ಸ್ಪೀಕರ್ ರಮೇಶ್ ಕುಮಾರ್ ಪರೋಕ್ಷವಾಗಿ ನೀಡಿರುವ ವಾರ್ನಿಂಗ್ ನಲ್ಲಿ ಇನ್ನುಳಿದ ಅತೃಪ್ತರ ಪಟ್ಟಿ ಅವರ ಬಳಿ ಇದ್ದು ಯಾವ ಕ್ಷಣ ಯಾವ ತಿರುವು ಪಡೆಯುತ್ತದೆಯೋ ಗೊತ್ತಿಲ್ಲ ? ಯಾರಿಗೆ ಯಾವ ಚಾಟಿ ಏಟು ಮಂತ್ರಿ ಸ್ಥಾನಕ್ಕೆ ಅಡ್ಡಿಯಾಗುತ್ತದೆಯೋ ಕಾದು ನೋಡಬೇಕಾಗಿದೆ…. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ