*ನೀರಿಗಾಗಿ ನಾವು ಹೆಜ್ಜೆ ಹಾಕಿದಾಗ ಇವರೆಲ್ಲ ಎಲ್ಲಿಗೆ ಹೋಗಿದ್ದರು? ಡಿಸಿಎಂ ಪ್ರಶ್ನೆ*
ಕಾವೇರಿ ಸಂಕಷ್ಟಕ್ಕೆ ಪರಿಹಾರವಾಗಿರುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಎಲ್ಲ ಅನುಮತಿ ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಂಕಷ್ಟದ ಪರಿಸ್ಥಿತಿಯಲ್ಲಿ ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರವಾಗಿದೆ. ನ್ಯಾಯಾಲಯ ಈ ವಿಚಾರವಾಗಿ ಕೆಳಹಂತದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದು, ಈಗ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅಗತ್ಯ ಎಲ್ಲ ಇಲಾಖೆಗಳ ಅನುಮತಿ ನೀಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ನಂತರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಕಾವೇರಿ ನೀರಿನ ವಿಚಾರವಾಗಿ ಮಾಧ್ಯಮಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು, “ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡು ಪಾಲಿನ ನೀರು ಹರಿಸಲು ನಾವು ಬದ್ಧರಾಗಿದ್ದೇವೆ. ನಿನ್ನೆ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಹ, ನಿಮ್ಮ ಪಾಲಿನ ನೀರು ನಿಮಗೆ ಸಿಗಲಿದೆ, ಹೀಗಿರುವಾಗ ಕರ್ನಾಟಕದವರು ಎಷ್ಟಾದರೂ ಆಣೆಕಟ್ಟೆ ಕಟ್ಟಿಕೊಳ್ಳಲಿ ಬಿಡಿ. ನೀವೇಕೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದೀರಿ? ಈ ವಿಚಾರವಾಗಿ ಕೆಳಹಂತದಲ್ಲೇ ತೀರ್ಮಾನ ಮಾಡಿ ಎಂದು ತಿಳಿಸಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸ್ನೇಹಿತರು ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಒತ್ತಡ ಹಾಕಲಿ ಎಂದು ಆಗ್ರಹಿಸಿದರು.
ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು 24 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆಗ್ರಹ ಮಾಡಿತ್ತು. ನಮ್ಮ ಅಧಿಕಾರಿಗಳು ತಾಂತ್ರಿಕ ಸಮಿತಿ ಮುಂದೆ, ನಾವು ಕೇವಲ 3 ಸಾವಿರ ಕ್ಯೂಸೆಕ್ ನೀರು ಬಿಡಲಷ್ಟೇ ಶಕ್ತವಾಗಿದ್ದೇವೆ ಎಂದು ಸಮರ್ಥವಾಗಿ ವಾದ ಮಂಡಿಸಿದರು. ಇದರ ಪರಿಣಾಮವಾಗಿ 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಮೊದಲು ಆದೇಶ ನೀಡಿತು. ನಂತರ 5 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ.
ನಾವು ಉತ್ತಮ ಮಳೆ ನಿರೀಕ್ಷೆ ಮಾಡಿದ್ದೆವು. ಆದರೆ ಮಳೆ ಅಭಾವ ಎದುರಾಗಿದೆ. ಈ ಮಧ್ಯೆ ಮಂಡ್ಯ ಹಾಗೂ ಇತರೆ ಭಾಗದ ರೈತರ ಬೆಳೆ ಉಳಿಸುವ ಉದ್ದೇಶದಿಂದ ಜಮೀನಿಗೆ ನೀರು ಹರಿಸಿ ಅವರ ರಕ್ಷಣೆ ಮಾಡಿದ್ದೇವೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಸರ್ವಪಕ್ಷ ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ವಿಚಾರಣೆಗೂ ಮುನ್ನ ಸರ್ವಪಕ್ಷ ನಾಯಕರ ಸಭೆ ಮಾಡಿದ್ದೆವು. ಆದರೆ ನ್ಯಾಯಾಲಯ ಎರಡೂ ರಾಜ್ಯಗಳ ಅರ್ಜಿ ಹಾಗೂ ಎರಡೂ ರಾಜ್ಯಗಳ ರೈತರ ಅರ್ಜಿಗಳನ್ನು ತಿರಸ್ಕರಿಸಿ, ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಆ ಮೂಲಕ ಈ ತಿಂಗಳು 27 ರವರೆಗೂ ನೀರು ಹರಿಸುವ ಪರಿಸ್ಥಿತಿ ಬಂದಿದೆ. ಈ ಹಿಂದೆ ಬಿಜೆಪಿ, ದಳದ ಸರ್ಕಾರ ಇದ್ದಾಗಲೂ ಇಂತಹ ಪರಿಸ್ಥಿತಿ ಎದುರಾಗಿತ್ತು. ಆಗಲೂ ರಾಜ್ಯ ನೀರು ಹರಿಸಿದೆ. ಬಿಜೆಪಿ ಸರ್ಕಾರ ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಹರಿಸುವುದಾಗಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದ ದಾಖಲೆಯೂ ನಮ್ಮ ಬಳಿ ಇದೆ. ಆದರೂ ಇಂದು ಯಡಿಯೂರಪ್ಪನವರು ಹಾಗೂ ಬೊಮ್ಮಾಯಿ ಅವರು ಮಾತನಾಡುತ್ತಿದ್ದಾರೆ.
ಈ ಪರಿಸ್ಥಿತಿಯಲ್ಲಿ ರಾಜಕಾರಣ ಮಾತನಾಡಲು ನನಗೆ ಇಚ್ಛೆ ಇಲ್ಲ. ನಾನು ರಾಜಕಾರಣ ಮಾಡಬಹುದು. ಎಲ್ಲರಿಗೂ ಉತ್ತರ ನೀಡುವಷ್ಟು ಶಕ್ತಿ ಜನ ನಮಗೆ ನೀಡಿದ್ದಾರೆ. ಕುಮಾರಣ್ಣ, ಯಡಿಯೂರಪ್ಪ, ಬೊಮ್ಮಾಯಿ ಅವರ ಪ್ರತಿ ಮಾತಿಗೂ ಅವರ ಸರ್ಕಾರದ ಸಮಯದಲ್ಲಿ ಏನಾಗಿತ್ತು ಎಂದು ದಾಖಲೆ ಸಮೇತ ಉತ್ತರ ನೀಡಬಲ್ಲೆ ಎಂದರು.
ಚಿತ್ರರಂಗ, ಕನ್ನಡಪರ ಸಂಘಟನೆಗಳು ಈಗ ಬಹಳ ಚೆನ್ನಾಗಿ ರೋಷಾವೇಶ ತೋರುತ್ತಿವೆ. ಬಹಳ ಸಂತೋಷ. ಅವರ ವಿಚಾರಗಳು ಈಗ ಹೊರಗೆ ಬರುತ್ತಿರುವುದಕ್ಕೆ ಸಂತೋಷವಾಗಿದೆ. ಆದರೆ ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ನೀರಿಗಾಗಿ ನಾವು ಹೆಜ್ಜೆ ಹಾಕಿದಾಗ ಇವರೆಲ್ಲ ಎಲ್ಲಿದ್ದರು, ಎಲ್ಲಿಗೆ ಹೋಗಿದ್ದರು? ಆಗಲೂ ಕೆಲವು ಸ್ವಾಮೀಜಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದರು. ನಾನು ಆ ಹೋರಾಟವನ್ನು ನನ್ನ ಸ್ವಾರ್ಥಕ್ಕೆ ಮಾಡಿದ್ದೆನಾ? ಆಗ್ಯಾಕೆ ಇವರು ಧ್ವನಿ ಎತ್ತಲಿಲ್ಲ?
ವಿರೋಧ ಪಕ್ಷದಲ್ಲಿರುವವರು ನಮ್ಮನ್ನು ದೂಷಣೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಜನರು ಹಾಗೂ ರೈತರ ರಕ್ಷಣೆಗೆ ಬದ್ಧವಾಗಿದ್ದು, ನಮ್ಮ ಕಾನೂನು ತಜ್ಞರ ವಾದ ನಮಗೆ ತೃಪ್ತಿ ಇದೆ. ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರು ಯಾವ ವಕೀಲರನ್ನು ನೇಮಿಸಿದ್ದರೋ ಅದೇ ವಕೀಲರನ್ನು ಇಟ್ಟುಕೊಂಡೇ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ.
ನಾವು ವಿಳಂಬವಾಗಿ ಹೋರಾಟ ಮಾಡಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅದಕ್ಕೇ ಆದ ಪ್ರಕ್ರಿಯೆಗಳಿವೆ. ಕೆಳ ಹಂತದಲ್ಲಿ ನಮಗೆ ನ್ಯಾಯ ಸಿಗಲಿಲ್ಲ ಎಂದಾಗ ನಾವು ಉನ್ನತ ನ್ಯಾಯಾಲಯದ ಮೊರೆ ಹೋಗಬೇಕು. ಸುಪ್ರೀಂ ಕೋರ್ಟ್ ಎರಡು ಬಾರಿಯೂ ನಾನು ಈ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿದೆ. ಮತ್ತೆ ಪ್ರಾಧಿಕಾರದ ಬಳಿ ಚರ್ಚೆ ಮಾಡಲು ಹೇಳಿದೆ. ಈಗ ಮರುಪರಿಶೀಲನೆ ಅರ್ಜಿ ಹಾಕಿದರೂ ಇಷ್ಟೇ ತಾನೇ ಆಗುವುದು.
ತಮ್ಮ ರಾಜ್ಯ ರಾಜಸ್ಥಾನದಲ್ಲೂ ಇದೇ ಪರಿಸ್ಥಿತಿ ಇಂದೆ ಎಂದು ಕೇಂದ್ರ ಜಲಶಕ್ತಿ ಸಚಿವರು ಹೇಳುತ್ತಿದ್ದರು. ದೇಶದಲ್ಲಿ ಮಳೆ ಬಾರದೇ ಇದ್ದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾವೇರಿ ಕೊಳ್ಳದಲ್ಲಿ ಈ ವರ್ಷದ ಆಗಸ್ಟ್ ತಿಂಗಳ ಮಳೆ ಕೊರತೆ ಕಳೆದ 130 ವರ್ಷಗಳಲ್ಲೇ ದಾಖಲೆ ಮಟ್ಟದ್ದಾಗಿದೆ. ಈ ಹಿಂದೆ ಕೆಆರ್ ಎಸ್ ನಲ್ಲಿ ಹೋಮ, ಹವನ ಮಾಡಿಸಿದ ಘಟನೆಗಳನ್ನು ನಾವು ನೋಡಿದ್ದೇವೆ.
ನಮ್ಮ ರಾಜ್ಯದ ಬಿಜೆಪಿಯ ಕೇಂದ್ರ ಸಚಿವರು ಸರ್ವಪಕ್ಷ ಸಂಸದರ ಸಭೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದರು. ಹೊರಗೆ ಮಾಧ್ಯಮಗಳ ಮುಂದೆ ಬಂದು ರಾಜಕಾರಣ ಹೇಳಿಕೆ ನೀಡಿದರು. ಇಲ್ಲೂ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳದು ಇದೇ ಧೋರಣೆ. ಅವರ ರಾಜಕಾರಣ ಅವರು ಮಾಡಲಿ.”
ಪ್ರಶ್ನೋತ್ತರ:
ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕಿತ್ತು ಎಂಬ ವಿರೋಧ ಪಕ್ಷಗಳ ವಾದದ ಬಗ್ಗೆ ಕೇಳಿದಾಗ, “ನಾವು ಹಾಗೂ ತಮಿಳುನಾಡು ಇಬ್ಬರೂ ಮೇಲ್ಮನವಿ ಸಲ್ಲಿಕೆ ಮಾಡಿದ್ದೆವು. ಎರಡನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಸಚಿವನಾಗಿ ಕೆಲವು ವಿಚಾರವನ್ನು ಬಿಚ್ಚಿಡಲು ಆಗುವುದಿಲ್ಲ. ಅದರ ಪರಿಣಾಮದ ಬಗ್ಗೆ ನಾನು ಅರಿತು ಮಾತನಾಡಬೇಕು” ಎಂದು ಹೇಳಿದರು.
ಕೇಂದ್ರ ಸಚಿವರು ರಾಜ್ಯ ಸರ್ಕಾರದ ಮನವಿಗೆ ಯಾವ ರೀತಿ ಸ್ಪಂದಿಸಿದ್ದಾರೆ ಎಂದು ಕೇಳಿದಾಗ, “ಅವರು ನಮ್ಮ ಶಕ್ತಿ ಅನುಸಾರ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಎರಡೂ ರಾಜ್ಯದವರನ್ನು ಕರೆದು ಮಾತುಕತೆ ನಡೆಸುವಂತೆ ಕೇಳಿದ್ದೇವೆ. ಎಲ್ಲ ವಿಚಾರವನ್ನೂ ಅವರ ಗಮನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿಗಳು ಸೇರಿದಂತೆ ಸಚಿವರುಗಳು ಸೇರಿ ಮೂರು ದಿನಗಳ ಕಾಲ ಎಲ್ಲಾ ಸಂಸದರು, ಸಚಿವರುಗಳ ಜತೆ ಚರ್ಚೆ ಮಾಡಿದ್ದೇವೆ. ಅವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು” ಎಂದರು.
ಬಂದ್ ಮಾಡದಿರುವಂತೆ ಮನವಿ:
ನಾಳೆ ಮಂಡ್ಯ ಬಂದ್ ಗೆ ಕರೆ ನೀಡಿರುವ ವಿಚಾರವಾಗಿ ಕೇಳಿದಾಗ, “ಮಂಡ್ಯ ಬಂದ್ ನಿಂದಾಗಿ ಯಾವುದೇ ಪ್ರಯೋಜನವಿಲ್ಲ. ಅನಗತ್ಯವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು. ಸರ್ಕಾರ ನಿಮ್ಮ ಪರವಾಗಿ ಹೋರಾಟ ಮಾಡುತ್ತಿದೆ. ಇಷ್ಟು ದಿನಗಳ ಕಾಲ ನಿಮ್ಮ ರಕ್ಷಣೆ ಮಾಡಿದ್ದು, ಮುಂದಿನ ದಿನಗಳಲ್ಲೂ ಮಾಡುತ್ತೇವೆ. ಬಂದ್ ನಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಹೀಗಾಗಿ ಬಂದ್ ಕೈಬಿಡಿ. ನಾವು ಅಧಿಕಾರದಲ್ಲಿದ್ದೇವೆ. ಬೈಸಿಕೊಳ್ಳಲು ನಾವಿದ್ದೇವೆ. ನಿಮ್ಮ ಹೋರಾಟವನ್ನು ನಾವು ಬೇಡ ಎನ್ನುವುದಿಲ್ಲ. ಆದರೆ ಜನರಿಗೆ ತೊಂದರೆಯಾಗುವುದು ಬೇಡ” ಎಂದು ತಿಳಿಸಿದರು.
ಮೇಕೆದಾಟು ವಿಚಾರವಾಗಿ ಕೇಳಿದಾಗ, “ನ್ಯಾಯಾಲಯ ಈ ವಿಚಾರವಾಗಿ ಪ್ರಾಧಿಕಾರದ ಹಂತದಲ್ಲಿ ಬಗೆಹರಿಸಿಕೊಳ್ಳಲು ಹೇಳಿದೆ. ನಾವು ಆದಷ್ಟು ಬೇಗ ಮೇಕೆದಾಟು ಯೋಜನೆ ಜಾರಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತೇವೆ” ಎಂದು ತಿಳಿಸಿದರು.
ಹಿಂದೆ ಮನಮೋಹನ್ ಸಿಂಗ್ ಮಧ್ಯ ಪ್ರವೇಶಿಸಿದ್ದರು:
ಪ್ರಧಾನಮಂತ್ರಿಗಳ ಮಧ್ಯ ಪ್ರವೇಶದ ಬಗ್ಗೆ ವಿರೋಧ ಪಕ್ಷಗಳು ಕೇಂದ್ರದತ್ತ ಬೆರಳು ಮಾಡುವ ಪ್ರಯತ್ನ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರದಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮಮೋಹನ್ ಸಿಂಗ್ ಅವರು ಕಾವೇರಿ ಪ್ರಾಧಿಕಾರದ ಸಭೆ ಕರೆದಿದ್ದರು. ಇಷ್ಟು ದಿನಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಹೀಗಾಗಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಿದ್ದರು. ಈಗ ನ್ಯಾಯಾಲಯವೇ ಈ ವಿಚಾರ ಬಗೆಹರಿಸಿಕೊಳ್ಳಲು ಹೇಳಿದೆ. ಕೇಂದ್ರ ಸರ್ಕಾರ ಯಾವಾಗ ದಿನಾಂಕ ನಿಗದಿ ಮಾಡುತ್ತದೋ ಅಂದು ಹೋಗಿ ಚರ್ಚೆ ಮಾಡಲು ನಾವು ಸಿದ್ಧ” ಎಂದು ತಿಳಿಸಿದರು.
ಸಚಿವ ಸಂಪುಟದ ಕೆಲ ಸಚಿವರಿಗೆ ಡಿಸಿಎಂ ವಿಚಾರವಾಗಿ ಚಿಂತೆ ಇರುವ ಬಗ್ಗೆ ಕೇಳಿದಾಗ, “ಅನೇಕರು ಆಸೆ ಪಡುತ್ತಾರೆ. ಆಸೆ ಪಡುವವರಿಗೆ ಉತ್ತರ ನೀಡಲು ಬೇರೆಯವರು ಇದ್ದಾರೆ. ಅವರು ಕೊಡುತ್ತಾರೆ. ನಾನು ಈ ವಿಚಾರದಲ್ಲಿ ಮೆತ್ತಗಾಗುತ್ತೇನೋ ಇಲ್ಲವೋ ಎಂಬುದು ನಿಮಗೂ ಗೊತ್ತಿದೆ, ಅವರಿಗೂ ಗೊತ್ತಿದೆ. ಬಿಜೆಪಿ ಹಾಗೂ ದಳದವರಿಗೂ ಗೊತ್ತಿದೆ. ನನ್ನ ರಾಜಕೀಯ ಜೀವನದ ಹಾದಿ ನೋಡಿ 1985ರಿಂದ ನನ್ನನ್ನು, ನನ್ನ ಹೋರಾಟ ನೋಡಿದ್ದೀರಿ. ಇದನ್ನು ನೋಡಿಯೇ ಪಕ್ಷ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದೆ” ಎಂದು ತಿಳಿಸಿದರು.
ಜಲಶಕ್ತಿ ಸಚಿವರು ನಿಮ್ಮ ಮನವಿಗೆ ಹೇಗೆ ಸ್ಪಂದಿಸಿದ್ದಾರೆ ಎಂದು ಕೇಳಿದಾಗ, “ಜಲಶಕ್ತಿ ಸಚಿವರು ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಮೇಕೆದಾಟು ಯೋಜನೆಗೆ ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಪರಿಹಾರ ಹಾಗೂ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬಹುದು” ಎಂದು ತಿಳಿಸಿದರು.
ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೀರಾ ಎಂದು ಕೇಳಿದಾಗ, “ಈ ವಿಚಾರವಾಗಿ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ