ಶಿಕ್ಷಕರ ವರ್ಗಾವಣೆಯಲ್ಲಿ ಭಾರಿ ಗೋಲ್ ಮಾಲ್
ಎಂ.ಕೆ.ಹೆಗಡೆ, ಬೆಳಗಾವಿ –
ಶಿಕ್ಷಕರ ವರ್ಗಾವಣೆ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಕಳೆದ 3-4 ವರ್ಷದಿಂದ ಕಾಯುತ್ತಿದ್ದ ಅಮಾಯಕ ಹಳ್ಳಿ ಶಿಕ್ಷಕರ ತಲೆಗೆ ಅಧಿಕಾರಿಗಳೇ ದೊಡ್ಡ ಟೋಪಿ ಹಾಕಿದ್ದು, ಬಲಾಢ್ಯರ, ದುಡ್ಡಿದ್ದವರ ಪರವಾಗಿ ನಿಂತಿದ್ದಾರೆ.
4 ವರ್ಷದ ಹಿಂದೆ ಕಾಂಗ್ರೆಸ್ ಸರಕಾರ ಒಳ್ಳೆಯ ಉದ್ದೇಶ ಇಟ್ಟುಕೊಂಡು ಶಿಕ್ಷಕರ ವರ್ಗಾವಣೆ ಕಾಯ್ದೆಗೆ ದೊಡ್ಡಮಟ್ಟದ ತಿದ್ದುಪಡಿ ತಂದಿದೆ. ಹಳ್ಳಿಗಳಲ್ಲಿ (ಸಿ ವಲಯ) ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆನ್ನುವ ದೃಷ್ಟಿ ಇಟ್ಟುಕೊಂಡು ಕಾನೂನು ಬದಲಾವಣೆ ಮಾಡಲಾಗಿದೆ. ಕಾನೂನು ಬದಲಾವಣೆ ಹಿನ್ನೆಲೆಯಲ್ಲಿ 2 ವರ್ಷ ವರ್ಗಾವಣೆ ನಡೆಸಲು ಸಾಧ್ಯವಾಗಿರಲಿಲ್ಲ.
ಆದರೆ ಈ ತಿದ್ದುಪಡಿ ನಗರ ಪ್ರದೇಶದಲ್ಲೇ ಹತ್ತಾರು ವರ್ಷದಿಂದ ಬೀಡುಬಿಟ್ಟಿರುವ ಶಿಕ್ಷಕರಿಗೆ ಬಿಸಿಯಾಯಿತು. ಅವರು ನಗರ ಬಿಟ್ಟು ಹಳ್ಳಿಗೆ ಹೋಗಲು ಸಿದ್ದರಿರಲಿಲ್ಲ. ಗ್ರಾಮೀಣ ಶಿಕ್ಷಕರಿಗಿಂತ ಲಾಬಿ ಮಾಡುವುದರಲ್ಲಿ ಪ್ರಬಲರಾಗಿರುವ ನಗರ ಶಿಕ್ಷಕರು ಸರಕಾರದ ಮೇಲೆ, ಅಧಿಕಾರಿಗಳ ಮೇಲೆ ತೀವ್ರ ಒತ್ತಡ ತರುತ್ತಲೇ ಮತ್ತೆರಡು ವರ್ಷ ವರ್ಗಾವಣೆ ನಡೆಯದಂತೆ ನೋಡಿಕೊಂಡರು.
ಅಧಿಕಾರಿಗಳ ಕೈಚಳಕ
ಆದರೆ ಈ ವರ್ಷ ತೀರಾ ಅನಿವಾರ್ಯತೆ ಬಂದಿದ್ದರಿಂದ ವರ್ಗಾವಣೆ ಆರಂಭಿಸಲು ನಿರ್ಧರಿಸಲಾಯಿತು. ಆದರೆ ಮತ್ತೆ ಅದೇ ಒತ್ತಡಗಳಿಂದಾಗಿ, ಅಧಿಕಾರಿ, ಸಿಬ್ಬಂದಿಯ ಬೇಜವಾಬ್ದಾರಿ ತನದಿಂದಾಗಿ 8 ಬಾರಿ ಬ್ರೇಕ್ ಬಿದ್ದಿತು. ಅಷ್ಟರ ನಂತರವೂ ಆರಂಭವಾಯಿತಾದರೂ ಶೇ.15ರಷ್ಟು (3 ವರ್ಷ ಸೇರಿ) ಮಾಡಬೇಕಿದ್ದ ವರ್ಗಾವಣೆಯನ್ನು ಕೇವಲ ಶೇ.4ಕ್ಕೆ ನಿಲ್ಲಿಸಲಾಗುತ್ತಿದೆ.
ತನ್ಮೂಲಕ ಮತ್ತೆ ಹಳ್ಳಿ ಶಿಕ್ಷಕರ ಆಸೆಗೆ ತಣ್ಣೀರೆರಚಿ ನಗರ ಶಿಕ್ಷಕರ ಹಿತ ಕಾಪಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾನೂನಿನ ನೆಪ ಮಾಡಿಕೊಂಡು ಕೈಚಳಕ ತೋರಿಸುತ್ತಿರುವ ಶಿಕ್ಷಣ ಇಲಾಖೆ, ದೊಡ್ಡ ಪ್ರಮಾಣದಲ್ಲಿ ಅವ್ಯವಹಾರಕ್ಕೆ ಕೈ ಹಾಕಿದೆ ಎನ್ನುವುದು ಬಹಿರಂಗವಾಗಿದೆ.
ಕಡ್ಡಾಯ ವರ್ಗಾವಣೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ, ವಿಕಲ ಚೇತನರಿಗೆ ಮತ್ತು ಪತಿ-ಪತ್ನಿ ಪ್ರಕರಣಕ್ಕೆ ವಿನಾಯಿತಿ ತೋರಿಸಿದ್ದರಿಂದ ಇದನ್ನೇ ಅಧಿಕಾರಿ-ಸಿಬ್ಬಂದಿ ದೊಡ್ಡ ದಂಧೆ ಮಾಡಿಕೊಂಡಿದ್ದಾರೆ. ಸಾವಿರಾರು ನಕಲಿ ಪ್ರಮಾಣಪತ್ರ ನೀಡಿರುವ ಸಂಗತಿ ಬಯಲಾಗಿದೆ. ಸರಕಾರಿ ಶಿಕ್ಷಕರಾಗಿರುವ ಪತಿ-ಪತ್ನಿ ಕಾನೂನಿನ ದುರ್ಲಾಭ ಮಾಡಿಕೊಂಡು ಪದೇ ಪದೆ ಬೇಕಾದಲ್ಲಿ ವರ್ಗಾವಣೆ ಪಡೆದುಕೊಳ್ಳುವ ಮೂಲಕವೂ ಇತರರಿಗೆ ಅನ್ಯಾಯ ಮಾಡುತ್ತಿದ್ದಾರೆ.
ವಿಷಯ ಹೊರಗೆ ಬಂದರೂ ಆ ಬಗ್ಗೆ ಕ್ರಮ ಕೈಗೊಳ್ಳುವ ಇಚ್ಛಾಸಕ್ತಿಯನ್ನು ಅಧಿಕಾರಿಗಳು ತೋರಿಸುತ್ತಿಲ್ಲ. ಅಸ್ಥಿರ ಸರಕಾರ ಮತ್ತು ಶಿಕ್ಷಣ ಸಚಿವರಿಲ್ಲದ ಸಂದರ್ಭವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಅಧಿಕಾರಿಗಳು.
ದೊಡ್ಡ ದಂಧೆ
ವರ್ಗಾವಣೆಯಿಂದ ಪಾರಾಗಲು ತಮಗೆ ಬೇಕಾದಂತೆ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ, ಪತಿ -ಪತ್ನಿ ಪ್ರಕರಣದಲ್ಲಿ ಬೋಗಸ್ ದಾಖಲೆಗಳನ್ನು ಸೃಷ್ಟಿಸುವ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇದರಲ್ಲಿ ಕೊಟ್ಯಂತರ ರೂ ಕೈ ಬದಲಾಗಿರುವ ಸಂಶಯವಿದೆ. ಒಂದೇ ಪ್ರದೇಶದಲ್ಲಿ ಇರುವ ಪತಿ-ಪತ್ನಿ ಕೂಡ ಬೇರೆ ತಾಲೂಕಿಗೆ ಹೋಗಲು ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಸರಕಾರಿ ಶಿಕ್ಷಕರಾದರೆ ಮಾತ್ರ ಈ ಅವಕಾಶವಿರುವುದರಿಂದ ಬೇರೆ ಶಿಕ್ಷಕರಿಗೆ ಇದರಿಂದ ದೊಡ್ಡ ಅನ್ಯಾಯವಾಗಿದೆ.
ಮಾಡಲಾಗಿರುವ ಹೊಸ ಕಾನೂನಿನಲ್ಲಿರುವ ನೂನ್ಯತೆಯನ್ನು ತಮಗೆ ಬೇಕಾದಂತೆ ನಿರೂಪಿಸುತ್ತಿರುವ ಅಧಿಕಾರಿಗಳು ಬಹಿರಂಗವಾಗಿಯೇ ದುಡ್ಡಿದ್ದವರ ಮತ್ತು ದೊಡ್ಡವರ ನೆರವಿಗೆ ನಿಂತಿದ್ದಾರೆ. ಇದನ್ನು ತಡೆಯುವವರು ಯಾರೂ ಇಲ್ಲವಾಗಿದೆ. ಟಿೀಚರ್ಸ್ ಡಾಟಾ ಸಿಸ್ಟಂ (ಟಿಡಿಎಸ್) ಅಪಲೋಡ್ ಮಾಡುವಲ್ಲಿ ಆಗಿರುವ (ಅಥವಾ ಮಾಡಿರುವ) ಲೋಪಗಳನ್ನು ಸರಿಪಡಿಸುವ ಅಥವಾ ಅಂತಹ ಅಧಿಕಾರಿ- ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಯಾರೂ ಮುಂದಾಗುತ್ತಿಲ್ಲ.
ಇಡೀ ಪ್ರಕರಣವನ್ನು ದೊಡ್ಡ ಮಟ್ಟದ ತನಿಖೆಗೆ ಒಳಪಡಿಸಿದರೆ ಭ್ರಷ್ಟಾಚಾರ ಹೊರಬರಲು ಸಾಧ್ಯ. ಈ ದಿಸೆಯಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸರಕಾರ ಶಿಕ್ಷಣ ಇಲಾಖೆಯನ್ನು ಕೊಳಚೆಗುಂಡಿಯನ್ನಾಗಿಸಿದಂತಾಗುತ್ತದೆ.
ಕಾನೂನು ಲೋಪ, ಇಲಾಖೆಯಲ್ಲಿನ ಭ್ರಷ್ಠಾಚಾರದಿಂದಾಗಿ ಅಮಾಯಕ ಶಿಕ್ಷಕರಿಗೆ ಭಾರಿ ಅನ್ಯಾಯವಾಗುತ್ತಿದೆ. ಕೆಲವೇ ಕೆಲವು ಶಿಕ್ಷಕರು ಸರಕಾರದ ಮೇಲೆ ಒತ್ತಡ ತಂದು ತಮಗೆ ಬೇಕಾದಂತೆ ಮಾಡಿಸಿಕೊಳ್ಳುತ್ತಿದ್ದಾರೆ. ಸಮಗ್ರ ಕಾನೂನನ್ನು ಪುನಃ ಬದಲಾವಣೆ ಮಾಡಿ ಸರಳೀಕೃತಗೊಳಿಸುವುದೊಂದೇ ಇದಕ್ಕಿರುವ ದಾರಿ. ಇಂದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರಿಗೆ ಎಲ್ಲವನ್ನೂ ತಿಳಿಸಿ ಹೇಳಲಾಗುವುದು. ನಗರ ಶಿಕ್ಷಕರಿಗೆ ಸಮಸ್ಯೆಯಾದರೂ ಪರವಾಗಿಲ್ಲ, ಹಳ್ಳಿಯಲ್ಲಿರುವ ಅಮಾಯಕ ಶಿಕ್ಷಕರಿಗೆ ನ್ಯಾಯ ಒದಗಿಸಲಾಗುವುದು.
-ಅರುಣ ಶಹಾಪುರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರತಿಕ್ರಿಯಿಸಿ -ವಾಟ್ಸಪ್ -8197712235, email [email protected]
ಇದನ್ನೂ ಓದಿ –
ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಹಠಾತ್ ಸ್ಥಗಿತ
ಇದ್ಯಾವ ವರ್ಗಾವಣೆ ನೀತಿ ?- ಶಿಕ್ಷಕರ ಆಕ್ರೋಶ
ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕ: ಕೊನೆಗೂ ಲಾಬಿಗೆ ಮಣಿದ ಸರಕಾರ!
ವರ್ಗಾವಣೆಗೆ ನಿರ್ಲಕ್ಷ್ಯ :ಸರಕಾರದ ವಿರುದ್ಧ ಶಿಕ್ಷಕರ ಕಿಡಿ
ಶಿಕ್ಷಕರ ವರ್ಗಾವಣೆ 3ನೇ ವರ್ಷವೂ ಅಯೋಮಯ! ಅದಕ್ಕಿದೆ 3 ಕಾರಣ!!
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಹೊರಟ್ಟಿ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ