Kannada NewsKarnataka NewsLatestPolitics

*2ನೇ ಬಾರಿ ಸಿಎಂ ಆದ ಬಳಿಕ ಮೊದಲ ಪೂರ್ಣಾವಧಿ ಜನತಾ ದರ್ಶನ*

ಸ್ಥಳದಲ್ಲೇ ಪರಿಹಾರಕ್ಕೆ ಆದ್ಯತೆ; ಅಧಿಕಾರಿ ಸಿಬ್ಬಂದಿ ಹಾಜರಿರಲು ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ನವೆಂಬರ್ 27 ರಂದು ಬೆಳಿಗ್ಗೆ 9.30 ಗಂಟೆಯಿಂದ ಗೃಹ ಕಚೇರಿ ಕೃಷ್ಣದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ.


ಇದಕ್ಕಾಗಿ ಮುಖ್ಯಮಂತ್ರಿ ಸಚಿವಾಲಯವು ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಇಂದು ಸಂಜೆ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.


ಅಹವಾಲುಗಳನ್ನು ಸ್ವೀಕರಿಸಲು ಒಟ್ಟು 20 ಕೌಂಟರುಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಎರಡು ಕೌಂಟರ್ ಗಳನ್ನು ಮೀಸಲಿರಿಸಲಾಗಿದೆ.

ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯವರು ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುವರು.

ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರು ಈಗಾಗಲೇ ಸುತ್ತೋಲೆ ಹೊರಡಿಸಿ ಸರ್ಕಾರದ ಎಲ್ಲ ಕಾರ್ಯದರ್ಶಿಗಳು / ಇಲಾಖಾ ಮುಖ್ಯಸ್ಥರು ಖುದ್ದು ಹಾಜರಿರುವಂತೆ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ/ ಉಪವಿಭಾಗ/ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ.

ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ತರುವಂತೆ ಕೋರಲಾಗಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿಯನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ದಲ್ಲಿ ಕಳೆದ ಮೂರು ದಿನಗಳಿಂದ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರಿಗೆ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯ ಮತ್ತು ಇತರ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿ ಸೇರಿ ಒಂದು ಸಾವಿರ ಜನರು ಜನತಾ ದರ್ಶನದ ಕರ್ತವ್ಯದಲ್ಲಿರುತ್ತಾರೆ. ಓರ್ವ ಡಿಸಿಪಿ, 3 ಎಸಿಪಿ, 10 ಇನಸ್ಪೆಕ್ಟರ್ಸ್, 15 ಪಿಎಸ್ಐ, 550 ಕಾನಸ್ಟೆಬಲ್ಸ್ ಭದ್ರತಾ ವ್ಯವಸ್ಥೆ ನಿರ್ವಹಿಸಲಿದ್ದಾರೆ.

ಅಹವಾಲು ಸ್ವೀಕಾರ ಮತ್ತು ಪರಿಶೀಲನೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು 350 ಸಿಬ್ಬಂದಿಗಳು, ಇತರೆ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1000 ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button