ಅಥಣಿಯಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡ ಮಾಜಿ ಶಾಸಕ ಮಹೇಶ ಕುಮಠಳ್ಳಿ
ಪ್ರಗತಿವಾಹಿನಿ ಸುದ್ದಿ – ಅಥಣಿ : ಹಲವಾರು ತಿಂಗಳುಗಳ ಹೈಡ್ರಾಮಾ ನಡೆಸಿ ಸರಕಾರದ ಪತನಕ್ಕೆ ಕಾರಣವಾಗಿ ಅನರ್ಹತೆಗೊಳಗಾದ ಕಾಂಗ್ರೇಸ್ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ದಿಢೀರ್ ಎಂದು ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಗಂಜಿ ಕೇಂದ್ರದಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ ಪ್ರಸಂಗ ಎದುರಾಯಿತು.
ತಾಲೂಕಿನಲ್ಲಿ ಕೃಷ್ಣಾ ನದಿಯ ಪ್ರವಾಹದಿಂದಾಗಿ ನಿರಾಶ್ರಿತರಾಗಿರುವ ಜನರಿಗೆ ರಡ್ಡೇರಹಟ್ಟಿ ಗ್ರಾಮದ ಗಂಜಿ ಕೇಂದ್ರದಲ್ಲಿ ಇಂದು ಬೆಳಗ್ಗೆ ಕಾಂಗ್ರೇಸ್ ಮುಖಂಡರು ಮೊದಲಿಗೆ ನಿರಾಶ್ರಿತರನ್ನು ಭೇಟಿಯಾಗಿ ಕುಂದು ಕೊರತೆಗಳನ್ನು ಆಲಿಸಲು ಹೋಗಿದ್ದರು. ಅದೇ ಸಮಯದಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ಮಗ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ ಅವರು ಬಂದರು.
ನಂತರದಲ್ಲಿ ಅಲ್ಲಿಯೇ ಅನರ್ಹ ಶಾಸಕ ಮಹೇಶ ಕುಮಠಳ್ಳಿ ಅವರು ಆಗಮಿಸಿದ್ದನ್ನು ಕಂಡು ಕಾಂಗ್ರೇಸ್ ಮುಖಂಡರು ಬೇಗನೆ ಅಲ್ಲಿಂದ ಕಾಲ್ಕಿತ್ತರು. ಇತ್ತ ಕಡೆ ನಿರಾಶ್ರಿತರಿಗೆ ಹಂಚಲು ಚಿದಾನಂದ ಸವದಿ ಅವರು ಹಣ್ಣು ಹಂಪಲು, ಬಿಸ್ಕೆಟುಗಳನ್ನು, ಔಷಧಗಳನ್ನು, ಬಾಳೆಹಣ್ಣು ಇತ್ಯಾದಿಗಳನ್ನು ತಂದಿದ್ದರು. ಈ ಹಂಚಿಕೆಯ ಕಾರ್ಯದಲ್ಲಿ ಕುಮಠಳ್ಳಿ ಕೂಡ ಸಹಕರಿಸಿದರೆಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದರು.
ನಂತರದಲ್ಲಿ ಚಿದಾನಂದ ಸವದಿ ಹಾಗೂ ಮಹೇಶ ಕುಮಠಳ್ಳಿ ಅವರು ಭೇಟಿಯಾಗಿ ಪರಸ್ಪರ ಚರ್ಚೆಯನ್ನು ನಡೆಸಿದ್ದನ್ನು ಎಲ್ಲ ಜನತೆ ಕುತೂಹಲದಿಂದ ನೋಡುತ್ತಿದ್ದರು. ಕೆಲವರ ಪ್ರಕಾರವಾಗಿ ಮಹೇಶ ಕುಮಠಳ್ಳಿ ಅವರು ಬಿಜೆಪಿ ಸೇರುವುದು ಖಚಿತವಾಗಿದ್ದಕ್ಕಾಗಿ ಸವದಿ ಅವರ ಜೊತೆ ಮಾತನಾಡುತ್ತಿದ್ದರು.
ಒಟ್ಟಿನಲ್ಲಿ ಕುಮಠಳ್ಳಿ ಅವರ ಈ ನಡೆ ಹಾಗೂ ಕಾಂಗ್ರೇಸ್ ನಾಯಕರ ಈ ಪ್ರಸಂಗದಿಂದಾಗಿ ಕ್ಷೇತ್ರದ ಜನತೆಯಲ್ಲಿ ಮಾತ್ರ ಕುತೂಹಲ ಮೂಡಿದ್ದಂತೂ ಸುಳ್ಳಲ್ಲ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ