Kannada NewsKarnataka NewsLatest

ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕ ಕಾರಣವೇ? -ಏನಂದ್ರು ಯಡಿಯೂರಪ್ಪ?

ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕ ಕಾರಣವೇ? -ಏನಂದ್ರು ಯಡಿಯೂರಪ್ಪ?


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಿಸಿದರೂ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರಿನಿಂದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ವರದಿಗಳು ಪ್ರಕಟವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಆಲಮಟ್ಟಿಯಿಂದ ಸಾಂಗ್ಲಿ ಹಾಗೂ ಕೊಲ್ಲಾಪುರ ಬಹಳ ದೂರದಲ್ಲಿವೆ. ಆದ್ದರಿಂದ ಈ ಜಲಾಶಯಗಳ ಹಿನ್ನೀರು ಆ ಜಿಲ್ಲೆಯ ವ್ಯಾಪ್ತಿಯವರೆಗೆ ನಿಲ್ಲುವುದಿಲ್ಲ.
ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ೧೨೩ ಟಿ.ಎಂ.ಸಿ ನೀರು ಸಂಗ್ರಹಿಸಬಹುದು. ಆದರೆ ಸದ್ಯಕ್ಕೆ ಕೇವಲ ೮೫ ಟಿ ಎಂಸಿ ನೀರು ಮಾತ್ರ ಇದೆ. ಅದೇ ರೀತಿ ನಾರಾಯಣಪುರ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ ೩೩ ಟಿ.ಎಂ.ಸಿ. ಸದ್ಯ ೧೮ ಟಿ ಎಂ.ಸಿ ಮಾತ್ರ ನೀರಿದೆ.
ಆಲಮಟ್ಟಿ ನೀರಿನಿಂದ ಅವರಿಗೆ ಅಪಾಯವಿಲ್ಲ; ನಮ್ಮ ರಾಜ್ಯಕ್ಕೇ ತೊಂದರೆಯಿದೆ. ನಮ್ಮ ಜಲಾಶಯಗಳಲ್ಲಿ ನೀರು ಸಂಗ್ರಹದಿಂದ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಮ್ಮಿಂದ ಅವರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದ ಸಿಎಂ ಜತೆ ಈಗಾಗಲೇ ಈ ಬಗ್ಗೆ ಮೂರು ಬಾರಿ ಚರ್ಚೆ ಮಾಡಿದ್ದೇನೆ. ಅಲ್ಲಿನ ಕೆಲ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಕಟವಾಗುತ್ತಿರುವುದರಿಂದ ಮತ್ತೇ ಸ್ಪಷ್ಟನೆ ನೀಡುತ್ತಿದ್ದೇನೆ ಎಂದರು.

ಐದು ಸಾವಿರ ಕೋಟಿ ಅಗತ್ಯ:

 

ರಾಜ್ಯದಲ್ಲಿ ಎದುರಾರುವ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಲು ಸದ್ಯಕ್ಕೆ ಅಂದಾಜು ೫೦೦೦ ಕೋಟಿ ಅಗತ್ಯವಿದೆ. ೩೦ ಸಾವಿರ ಮನೆಗಳನ್ನು ನಿರ್ಮಿಸಬೇಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಒಂದು ವಾರದ ಬಳಿಕ ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರವನ್ನು ನೀಡಲಾಗುವುದು.

ಸುಧಾಮೂರ್ತಿಗೆ ಧನ್ಯವಾದ; ದಾನಿಗಳಿಗೆ ಆಹ್ವಾನ:

ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಲು ಹತ್ತು ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಕೋಟಿ ರೂಪಾಯಿ ನೀಡಿರುವ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಸಲ್ಲಿಸಿದರು.
ಅದೇ ರೀತಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ದಾನಿಗಳು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು. ೨೦೦೫ ರಲ್ಲಿ ಇದೇ ರೀತಿ ಪ್ರವಾಹ ಬಂದಾಗ ದಾನಿಗಳು ೧೫೦೦ ಕೋಟಿ ರೂಪಾಯಿಗಳ ದೇಣಿಗೆ ನೀಡುವ ಮೂಲಕ ಸಂತ್ರಸ್ತರಿಗೆ ಆಸರೆಯಾಗಿದ್ದರು. ಸುಧಾಮೂರ್ತಿ ಅವರು ಹತ್ತು ಕೋಟಿ ನೀಡುವ ಮೂಲಕ ಉಳಿದ ದಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ದಂಪತಿ ರಕ್ಷಣೆ -ಸಿಎಂ ಸಂತಸ:

ಪ್ರವಾಹಕ್ಕೆ ಸಿಲುಕಿ ಬೆಳಗಾವಿ ತಾಲ್ಲೂಕಿನ ಕಬಲಾಪುರ ಗ್ರಾಮದ ಮನೆಯೊಂದರ ಮೇಲೆ ಸುಮಾರು ನಲವತ್ತು ತಾಸುಗಳಿಂದ ಕುಳಿತಿದ್ದ ಕಾಳಪ್ಪ-ರತ್ನವ್ವ ದಂಪತಿಯನ್ನು ರಕ್ಷಿಸಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಆಸಕ್ತಯಿಂದಾಗಿ ಎರಡು ವಿಶೇಷ ಹೆಲಿಕಾಪ್ಟರ್ ಬಂದಿದ್ದು, ರಕ್ಷಣಾ ಕಾರ್ಯಕ್ಕಾಗಿ ಬೆಳಗಾವಿಯಲ್ಲಿ ನಿಯೋಜಿಸಲಾಗಿದೆ ಎಂದರು.
ಇನ್ನೂ ಹೆಚ್ಚಿನ ರಕ್ಷಣಾ ದೋಣಿ ಹಾಗೂ ಹೆಲಿಕಾಪ್ಟರ್ ಒದಗಿಸುವ ಮೂಲಕ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗುವುದು. ಜನರು ಎಲ್ಲೇ ಸಂಕಷ್ಟದಲ್ಲಿದ್ದರೂ ಅವರ ರಕ್ಷಣೆ. ಮುಂಬರುವ ದಿನಗಳಲ್ಲಿ ಮನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಹಾರಾಷ್ಟ್ರ ಸಿಎಂ ಜತೆ ಚರ್ಚೆ:

ಉಭಯ ರಾಜ್ಯಗಳ ಜಲಾಶಯಗಳಲ್ಲಿ ನೀರು ಸಂಗ್ರಹ ಮತ್ತು ಬಿಡುಗಡೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜತೆ ಖುದ್ದಾಗಿ ಮಾತನಾಡಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಪ್ರವಾಹ ಬಾಧಿತ ಪ್ರದೇಶಗಳ ಭೇಟಿಯ ಬಳಿಕ ಚಿಕ್ಕೋಡಿಯ ಪ್ರವಾಸಿಮಂದಿರದಲ್ಲಿ ನಡೆದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಮಳೆಯ ಸಂದರ್ಭದಲ್ಲಿ ಜಲಾಶಯಗಳಿಂದ ದಿಢೀರ್ ನೀರು ಬಿಡುಗಡೆಮಾಡುವುದರಿಂದ ಉಭಯ ರಾಜ್ಯಗಳ ನದಿಪಾತ್ರದ ಜನರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚೆ ನಡೆಸಿ, ಸಮನ್ವಯತೆ ಸಾಧಿಸುವ ಅಗತ್ಯವಿದೆ ಎಂದರು.
ಉಭಯ ರಾಜ್ಯಗಳ ಜಲಾಶಯದಲ್ಲಿ ನೀರು ಸಂಗ್ರಹಣೆ ಹಾಗೂ ಹಿನ್ನೀರಿನಿಂದ ಉಂಟಾಗುವ ಪರಿಣಾಮಗಳ ಕುರಿತು ಅಧಿಕಾರಿಗಳು ಉನ್ನತಮಟ್ಟದ ಸಭೆ ನಡೆಸುವ ಮೂಲಕ ಪರಸ್ಪರ ಮಾಹಿತಿ ವಿನಮಯ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ್ ಕೋರೆ, ಶಾಸಕರಾದ ಗಣೇಶ್ ಹುಕ್ಕೇರಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಪಿ.ರಾಜೀವ್, ದುರ್ಯೋಧನ ಐಹೊಳೆ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ, ಹನುಮಂತ ನಿರಾಣಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿಗೆ ಪಠ್ಯಪುಸ್ತಕ ಕೇಳಿದ ವಿದ್ಯಾರ್ಥಿನಿ!


ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವಿದ್ಯಾರ್ಥಿನಿಯೊಬ್ಬಳು ಪಠ್ಯಪುಸ್ತಕ ಕೊಡಿಸುವಂತೆ ಕೇಳಿದಳು.
ಒಂದು ಕ್ಷಣ ಆಶ್ಚರ್ಯಚಕಿತಗೊಂಡ ಮುಖ್ಯಮಂತ್ರಿಗಳು, ನಾಳೆ ಸಂಜೆಯೊಳಗೆ ಅಗತ್ಯ ಪಠ್ಯಪುಸ್ತಕಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಹಿರಣ್ಯಕೇಶಿ ನದಿ ಪ್ರವಾಹದಿಂದ ನಿರಾಶ್ರಿತರಾಗಿರುವ ಸಂಕೇಶ್ವರ ಪಟ್ಟಣದ ರಾಮಚಿತ್ರ ಮಂದಿರದಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಿ.ಎ. ಮೊದಲ ವರ್ಷದ ವಿದ್ಯಾರ್ಥಿನಿ ಸೀಮಾ ಇಂಗಳಿ ಪಠ್ಯಪುಸ್ತಕ ನೀರಿನಲ್ಲಿ ಹಾಳಾಗಿರುವುದರಿಂದ ಓದುವುದಕ್ಕೆ ತೊಂದರೆಯಾಗಿದೆ ಎಂದು ಅಹವಾಲು ಹೇಳಿಕೊಂಡಳು.
ಆಕೆಯ ಜತೆಗೆ ಮಾತನಾಡಿದ ಮುಖ್ಯಮಂತ್ರಿಗಳು, ಅಗತ್ಯ ಪುಸ್ತಕಗಳ ಪಟ್ಟಿಯನ್ನು ನೀಡುವಂತೆ ತಿಳಿಸಿದರು. ಪಟ್ಟಿಯನ್ನು ನೀಡಿದ ತಕ್ಷಣ ಪಠ್ಯಪುಸ್ತಕಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ತಿಳಿಸಿದರು.

ಚಪ್ಪಾಳೆ ತಟ್ಟಿ ಸ್ವಾಗತಿಸಿದ ಸಂತ್ರಸ್ತರು:

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿದಾಗ ಜನರು ತಮ್ಮ ಸಂಕಷ್ಟದ ನಡುವೆಯೂ ಚಪ್ಪಾಳೆ ತಟ್ಟಿ ಸ್ವಾಗತ ಕೋರಿದರು.

ಸಂತ್ರಸ್ತರನ್ನು ಕಂಡ ತಕ್ಷಣ ಮುಖ್ಯಮಂತ್ರಿಗಳು ಕೈಮುಗಿದುಕೊಂಡು ನೇರವಾಗಿ ಅವರ ಬಳಿಗೆ ತೆರಳಿದರು. ಇದರಿಂದ ಸಂತಸಗೊಂಡ ಬೆಳಗಾವಿ ನಗರದ ಸಾಯಿಭವನ ಹಾಗೂ ಸಂಕೇಶ್ವರದ ರಾಮಚಿತ್ರ ಮಂದಿರದಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಜತೆ ಮಾತನಾಡಿದ ಅವರು, ಊಟೋಪಹಾರ, ಬಟ್ಟೆ, ಹಾಸಿಗೆ-ಹೊದಿಕೆಗಳನ್ನು ತಕ್ಷಣವೇ ಒದಗಿಸಲಾಗುವುದು ಎಂದರು. ಬಹುತೇಕ ಸಂತ್ರಸ್ತರು ಮನೆಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡರು.
ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಶಾಸಕರಾದ ಉಮೇಶ್ ಕತ್ತಿ, ಅಭಯ್ ಪಾಟೀಲ, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಬೆಳಗಾವಿ ಉತ್ತರ ವಲಯ ಐಜಿಪಿ ಎಚ್.ಜಿ. ಸುಹಾಸ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button