Kannada NewsKarnataka NewsLatest

*ರಾಮನ ಮೂರ್ತಿ ಪ್ರತಿಷ್ಠಾಪನೆ ಮೂಲಕ ರಾಮರಾಜ್ಯಕ್ಕೆ ಅಡಿಗಲ್ಲು ಹಾಕಲಾಗಿದೆ : ಬಸವರಾಜ ಬೊಮ್ಮಾಯಿ*

ಮೋದಿಯವರಿಂದಲೇ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಬೇಕೆಂದು ಮೋದಲೇ ನಿರ್ಧರಿತವಾಗಿತ್ತು: ಬಸವರಾಜ ಬೊಮ್ಮಾಯಿ

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿ಼ಷ್ಠಾಪನೆ ಮೂಲಕ ರಾಮ ರಾಜ್ಯದ ಅಡಿಗಲ್ಲು ಹಾಕಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಡಾ. ಜಯಶ್ರೀ ಅರವಿಂದ ಅವರು ಶ್ರೀರಾಮನ ಕುರಿತ ಹಾಡುಗಳಿಗೆ ಸಂಗಿತ ಸಂಯೋಜನೆ ಮಾಡಿರುವ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದರು. ರಾಮ ರಾಜ್ಯ ಎಂದರೆ ಎಲ್ಲ ರೀತಿಯ ಅವಕಾಶ, ಸಮೃದ್ದಿ, ಬಡತನ ಎಲ್ಲಿಯೂ ಕಾಣದಂತಾಗುವುದು, ಅನ್ಯಾಯ ಆಗದಂತೆ ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡುವುದು ರಾಮರಾಜ್ಯ, ಅದರ ಸಂಕಲ್ಪವನ್ನು ಪ್ರಧಾನಿ ಮೋದಿಯವರು ಮಾಡಿರುವುದರಿಂದ ಅವರಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ಕಾಲದಲ್ಲಿ ಇರುವ ನಾವು ಧನ್ಯರು. ರಾಮ ರಾಜ್ಯ ಸ್ಥಾಪನೆಯಾಗಿ ಎಲ್ಲರೂ ನೆಮ್ಮದಿಯಾಗಿ ಇರುವಂತಾಗಲಿ ಎಂದರು.


ಎಲ್ಲದಕೂ ಕಾಲ ಕೂಡಿ ಬರಬೇಕು. ಐನೂರು ವರ್ಷಕ್ಕಿಂತ ಹೆಚ್ಚು ಅಯೋದ್ಯೆಯ ಜನ್ಮ ಸ್ಥಳದಿಂದ ರಾಮನನ್ನು ದೂರ ಇಟ್ಟಿದ್ದರು. ಜ. 22 ಕ್ಕೆ ಮತ್ತೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತದೆ. ಅದೊಂದು ಅಮೃತಗಳಿಗೆ. ಈ ಕಾರ್ಯಕ್ರಮವೂ ಅಷ್ಟೇ ಪೂರ್ವ ನಿರ್ಧಾರಿತ ಅನಿಸುತ್ತದೆ. ಯಾಕೆಂದರೆ ನಿನ್ನೆಯಷ್ಟೆ ರಾಮನ ಜನ್ಮ ಸ್ಥಳಕ್ಕೆ ಗರ್ಭಗುಡಿ ಸೇರಿದ್ದಾನೆ. ಇದೇ ಸಂದರ್ಭದಲ್ಲಿ ರಾಮ ಬರುವನು ಈ ಹಾಡು ಬಿಡುಗಡೆ ಮಾಡಿರುವುದು ಕಾಲ‌ ನಿರ್ಣಯ ಅಂತ ಅನಿಸುತ್ತದೆ ಎಂದರು.


ಶ್ರೀರಾಮ ಚಂದ್ರ ಬಹಳ ವೈಶಿಷ್ಟ್ಯವಾಗಿರುವ ಅವತಾರ, ವಿಷ್ಣುವಿನ ಅವತಾರದಲ್ಲಿ ರಾಮನ ಅವತಾರ ಬಹಳ ಶ್ರೇಷ್ಟವಾದದ್ದು, ಅದು ಆದರ್ಶವಾದ ಅವತಾರ. ನಾವು ಎಲ್ಲಿ ದಾರಿವತಪ್ಪುತ್ತೇವೆಯೊ ಅಲ್ಲಿ ರಾಮ ಬಂದು ಆದರ್ಶದ ಮಾರ್ಗ ತೋರಿಸುತ್ತಾನೆ. ರಾಮ ತತ್ವ ಬಿಟ್ಟು ಬದುಕಲೇ ಇಲ್ಲ‌. ಅವನ ಬಾಲ್ಯದಿಂದ ಹಿಡಿದು, ಕಾಡಿಗೆ ಹೋದರೂ ಅವನು ತತ್ವ ಆದರ್ಶ ಬಿಟ್ಟು ಬದುಕಲಿಲ್ಲ. ನಾವು ಜನರೊಂದಿಗೆ ತೋರಿಕೆಯ ಆದರ್ಶದ ಮಾತನಾಡುತ್ತೇವೆ. ಬೇರೆ ಪಾಲನೆ ಮಾಡುತ್ತೇವೆ.


ವಾಲ್ಮಿಕಿ ರಾಮಾಯಣ ಅತ್ಯಂತ ಶ್ರೇಷ್ಠ ರಾಮಾಯಣ, ರಾಮ, ಪಿತೃವಾಕ್ಯ ಪರಿಪಾಲಕನಾಗಿದ್ದ ತಂದೆ ಮಗನ ಸಂಬಂಧ ಹೇಗಿರಬೇಕು ಅಂತ ರಾಮಾಯಣ ಹೇಳುತ್ತದೆ. ರಾಮ ಲಕ್ಷ್ಮಣ, ರಾಮ ಭರತನ ಸಂಬಂಧ ಅಣ್ಣ ತಮ್ಮಂದಿರ ಸಂಬಂಧ ಹೇಗಿರಬೆಕು ಎನ್ನುವುದನ್ನು ರಾಮಾಯಣ ಹೇಳುತ್ತದೆ. ಲಕ್ಷ್ಮಣ 14 ವರ್ಷ ರಾಮನ ಜೊತೆ ವನವಾಸ ಕೈಗೊಂಡ. ಇನ್ನೊಬ್ಬ ಭರತ ಆಡಳಿತ ನಡೆಸಲು ಕೊಟ್ಟರೆ ಇದು ನನ್ನದಲ್ಲ ಎಂದು ರಾಮನ ಪಾದುಕೆ ಇಟ್ಟು ಅಧಿಕಾರ ನಡೆಸಿದ. ಈ ಸಂಸಸ್ಕೃತಿ ಯಾವ ದೇಶದಲ್ಲಿದೆ. ಈಗ ಯಾರಿಗಾದರೂ ಅಧಿಕಾರ ಕೊಟ್ಟರೆ ಯಾರೂ ಬಿಟ್ಟು ಕೊಡುವುದಿಲ್ಲ. ಪತಿ ಪತ್ನಿ ಸಂಬಂಧ ಇವತ್ತಿನ ಕಾಲದಲ್ಲಿ ಎಲ್ಲಿ ಸಿಗುತ್ತದೆ. ಗಂಡ ದುಡಿದು ತಂದರೆ ಮಾತ್ರ ಗಂಡ, ಇಲ್ಲದಿದ್ದರೆ ನಾನೇ ಗಂಡ ಅನ್ನುವ ಕಾಲ ಈಗಿದೆ. ಗುರು ಶಿಷ್ಯರ ಸಂಬಂಧ, ರಾಮ ಆಂಜನೇಯ ಸಂಬಂಧ, ಎಲ್ಲ ಸಂಬಂಧಗಳ ಪರೀಕ್ಷೆಗಳು ರಾಮಾಯಣದಲ್ಲಿ ನಡೆದಿವೆ. ರಾಮ ಇಡೀ ಸೃಷ್ಟಿಯಲ್ಲಿದ್ದಾನೆ ಗಾಳಿ, ನೀರು ಮಣ್ಣಿನಲ್ಲಿ ನಮ್ಮ ಮನಸಿನಲ್ಲಿ ಇದ್ದಾನೆ ಎಂದು ಹೇಳಿದರು.


ರಾಮನ ಜನ್ಮ ಸ್ಥಳದಲ್ಲಿ ಬಾಬರಿ ಮಸೀದಿ ಇದ್ದುದರಿಂದ ಅಲ್ಲಿ ಪೂಜೆ ಮಾಡಲು ಆಗಲಿಲ್ಲ. ಅವರ ಧರ್ಮ ಗ್ರಂಥದಲ್ಲಿಯೂ ಇದೆ. ಬೇರೆಯವರ ಧರ್ಮದ ಮಂದಿರ‌ ಕೆಡವಿ ಮಸೀದಿ ಕಟ್ಟಿದರೆ ನಮಾಜ್ ಮಾಡುವುದಿಲ್ಲ ಅಂತ. ರಾಮನು ಯಾವಾಗ ಬರಬೇಕು ಅಂತ ತೀರ್ಮಾನ ಮಾಡಿದ್ದನೋ ಆಗಲೇ ಬರುತ್ತಿದ್ದಾನೆ. ತ್ರೇತಾಯುಗದ ರಾಮ ಕಲಿಯುಗದಲ್ಲಿ ಜಗತ್ತಿನ ಶ್ರೇಷ್ಟ ನಾಯಕರಾಗಿರುವ ನರೇಂದ್ರ ಮೋದಿಯವರಿಂದಲೇ ಪ್ರತಿಷ್ಠಾಪನೆ ಆಗಬೇಕು ಎಂದು ತೀರ್ಮಾನ ಆಗಿತ್ತು. ಭಕ್ತಿ ಎಂದರೆ ಪ್ರೀತಿ ಅದು ನಿರ್ಭಂಧ ರಹಿತ ಭಕ್ತಿ. ದೇವರಲ್ಲಿ ತನ್ನನ್ನು ತಾನೇ ಅರ್ಪಿಸಿಕೊಳ್ಳುವುದು. ಭಕ್ತಿ ಎಂದರೆ ದೇವರಲ್ಲಿ ಕರಗಿ ಲೀನವಾಗುವುದು. ಆ ಗುಣ ನರೇಂದ್ರ ಮೋದಿಯವರಲ್ಲಿ ಇದೆ. ಅದೇ ಕಾರಣಕ್ಕೆ ಅವರ ಮೂಲಕ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಉತ್ತರಾದಿ ಮಠದ ಸಂಚಾಲಕರಾದ ಸತ್ಯಧ್ಯಾನ ಆಚಾರ್ಯ ಕಟ್ಟಿ, ಡಾ. ಜಯಶ್ರೀ ಅರವಿಂದ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button