ಆವತ್ತಿನ ಪರಿಸ್ಥಿತಿಯಲ್ಲಿ ಹಾಗೆ ಮಾತನಾಡಿದ್ದೆ ಎಂದ ಜಗದೀಶ್ ಶೆಟ್ಟರ್!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಗ ನನಗೆ ಬಿಜೆಪಿ ಟಿಕೆಟ್ ಕೊಟ್ಟಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಸೇರುವ ಪರಿಸ್ಥಿತಿ ಬಂತು. ಅವತ್ತಿನ ಪರಿಸ್ಥಿತಿಯಲ್ಲಿ ಹಾಗೆ ಮಾತನಾಡಿದ್ದೆ. ನಂತರದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಕರೆದು ಮಾತನಾಡಿದರು. ಈಗ ಎಲ್ಲವೂ ಸರಿಯಾಗಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬೆಳಗಾವಿಯ ಜನರು ನನಗೆ ಮತ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿನಂತಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳ ಹಿಂದೆ ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕುರಿತು ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.
ಬೆಳಗಾವಿ ಜನರು ಯಾರ ಮುಖ ನೋಡಿ ಮತ ಹಾಕಬೇಕು? ನಿಮ್ಮ ಮುಖವೋ, ನರೇಂದ್ರ ಮೋದಿ ಮುಖವೋ ಎಂದು ಕೇಳಿದಾಗ, ದೇಶಕ್ಕೆ ಮೋದಿ ಅಗತ್ಯ, ಹಾಗಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನನಗೆ ಮತ ನೀಡಬೇಕು ಎಂದರು.
ಬೆಳಗಾವಿ ಮೇಲೆ ಹುಬ್ಬಳ್ಳಿ ರಾಜಕಾರಣಿಗಳು ಸವಾರಿ ಮಾಡುತ್ತ ಹೋದರೆ ಹೇಗೆ? ಎನ್ನುವ ಪ್ರಶ್ನೆಗೆ, ನಾವು ಸವಾರಿ ಮಾಡುವುದಿಲ್ಲ, ನಾನು ಬೆಳಗಾವಿಯ ಯಾವುದೇ ಯೋಜನೆಗಳನ್ನು ಹುಬ್ಬಳ್ಳಿಗೆ ಕಿತ್ತುಕೊಂಡು ಹೋಗಿಲ್ಲ ಎಂದರು.
ರಾಷ್ಟ್ರೀಯತೆ, ರಾಷ್ಟ್ರದ ಅಭಿವೃದ್ಧಿ ವಿಷಯ ಚರ್ಚೆಯಾಗಬೇಕು, ನಾನು ಹೊರಗಿನವನು ಎನ್ನುವ ವಿಷಯ ಮಹತ್ವ ಅಲ್ಲ ಎಂದ ಅವರು, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಸ್ಥಗಿತಗೊಂಡಿದೆ. ಲೋಕಸಭೆ ಚುನಾವಣೆ ಆದ ಮೇಲೆ ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕಾಗುತ್ತದೆ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಅವರ ಶಾಸಕರೇ ಬಂಡಾಯವೇಳುತ್ತಾರೆ. ಸರಕಾರ ಯಾವುದೇ ಕ್ಷಣದಲ್ಲಿ ಪತನವಾಗಬಹುದು ಎಂದರು.
ಬೆಳಗಾವಿಗಾಗಿ ಹಲವು ಯೋಜನೆಗಳನ್ನು ತರುವ ಉದ್ದೇಶ ಹೊಂದಿದ್ದೇನೆ. ನಾನು ಮುಖ್ಯಮಂತ್ರಿ ಇದ್ದಾಗ ಇಲ್ಲಿ ಸುವರ್ಣ ವಿಧಾನಸೌಧ ಉದ್ಘಾಟಿಸಿದ್ದೇನೆ. ನನಗೆ 30 ವರ್ಷದಿಂದ ಬೆಳಗಾವಿ ಜೊತೆಗೆ ಸಂಬಂಧವಿದೆ ಎಂದು ಶೆಟ್ಟರ್ ಹೇಲಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ, ಎಂ.ಬಿ.ಜಿರಲಿ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ